ಹಾವೇರಿ: ದೇಶದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಲೇ ಇದೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಯಾವುದೇ ಕನಿಷ್ಠ ಕಾರ್ಯಕ್ರಮ ಕೈಗೊಳ್ಳದೇ ಯುವಜನರನ್ನು ಸಂಕಷ್ಟಕ್ಕೆ ದೂಡುತ್ತಿವಿ. ಉದ್ಯೋಗದ ಹಕ್ಕು ಮೂಲಭೂತ ಹಕ್ಕು ಆದಾಗ ಮಾತ್ರ ಯುವಜನರ ಬದುಕಿಗೆ ಭದ್ರತೆ ಸಿಗಲು ಸಾಧ್ಯ, ಅದಕ್ಕಾಗಿ ಯುವಜನರು ದೊಡ್ಡ ಆಂದೋಲನ ನಡೆಸುವುದು ಅನಿವಾರ್ಯವಿದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಅಭಿಪ್ರಾಯಪಟ್ಟರು.ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಶನಿವಾರ ಡಿವೈಎಫ್ಐ ಜಿಲ್ಲಾ ಸಮಿತಿಯು ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರ್ಕಾರಿ ಉದ್ಯೋಗಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಮತ್ತು ಖಾಲಿ ಹುದ್ದೆಗಳ ಭರ್ತಿಯಲ್ಲಿ ವಿಳಂಬವಾಗುತ್ತಿರುವುದು ಯುವಕರಲ್ಲಿ ನಿರಾಸೆಯನ್ನು ಉಂಟುಮಾಡುತ್ತಿದೆ ಎಂದರು.
ನಮ್ಮ ಹಾವೇರಿ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಜಿಲ್ಲೆಗೆ ಕೃಷಿಯಾಧಾರಿತ ಕೈಗಾರಿಕೆಗಳನ್ನು ಆರಂಭಿಸಿ, ಜಿಲ್ಲೆಯ ಯುವಜನರಿಗೆ ಉದ್ಯೋಗವಕಾಶಗಳನ್ನು ಒದಗಿಸಲು ಜಿಲ್ಲೆಯ ಜನಪ್ರತಿನಿಧಿಗಳು ವಿಶೇಷ ಪ್ರಯತ್ನ ನಡೆಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಯುವಜನರ ಉದ್ಯೋಗ, ಶಿಕ್ಷಣ ಸೇರಿದಂತೆ ಇತರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವುದರೊಂದಿಗೆ ಹೋರಾಟಗಳನ್ನು ರೂಪಿಸುವುದು. ಹಾಗೂ ಸದಸ್ಯತ್ವ ಅಭಿಯಾನವನ್ನು ಜಿಲ್ಲೆಯಾದ್ಯಂತ ವಿಸ್ತರಿಸಿ ಯುವಜನರನ್ನು ಸಂಘಟಿಸಬೇಕು ಎಂದರು.ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲ ನಾರಾಯಣ ಕಾಳೆ ಮಾತನಾಡಿ, ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತೆ, ಸೌಹಾರ್ದತೆಗಾಗಿ ಡಿವೈಎಫ್ಐ ನಿರಂತರವಾಗಿ ಶ್ರಮಿಸುತ್ತಿದೆ. ಡಿವೈಎಫ್ಐ ಸಂವಿಧಾನ ಕಾರ್ಯಕ್ರಮ, ಧ್ಯೇಯೊದ್ದೇಶಗಳನ್ನು ಯುವಜನರ ಮಧ್ಯೆ ವ್ಯಾಪಕವಾಗಿ ಪ್ರಚಾರಗೊಳಿಸಬೇಕು. ಆ ಮೂಲಕ ಯುವಜನರನ್ನು ಸಂಘಟಿಸಿ ಅವರ ಹಕ್ಕುಗಳಿಗಾಗಿ ಪರಿಣಾಮಕಾರಿ ಹೋರಾಟಗಳನ್ನು ಕಟ್ಟುವ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾ ಮುಖಂಡರಾದ ರೇಣುಕಾ ಕಹಾರ ಸ್ವಾಗತಿಸಿ, ನಿರ್ವಹಿಸಿದರು. ಖಲಂದರ್ ಅಲ್ಲಿಗೌಡ್ರ ವಂದಿಸಿದರು. ಬಸವರಾಜ ಎಸ್, ವಾಸೀಮ್ ತಿಮ್ಮಾಪೂರ, ಬೀರಪ್ಪ ಸೂರಣಗಿ, ಕಿಶೋರ್ ಧೋತ್ರರೆ, ಚಂದ್ರು ಬಡಿಗೇರ, ಫಕ್ಕಿರೇಶ ಹರಿಜನ, ಅರುಣ ನಾಗಾವತ್, ಚೈತ್ರಾ ಕೊರವರ, ಮಂಜುಳಾ ಹಾನಗಲ್, ಮಂಜುಳಾ ತಡಸ, ಕವಿತಾ ಪೂಜಾರ, ಮೌಲಾಲಿ ನವಲಗುಂದ, ಹರೀಶ ಗುಮ್ಮನಳ್ಳಿ, ನಿಂಗರಾಜ ಪೂಜಾರ, ವೀರಣ್ಣ ಗಡ್ಡಿಯವರ, ಮಕಬುಲ್ ಯಲ್ಲಾಪೂರ, ಚಾಂದಸಿಂಗ್ ಸಿಖ್, ವಿಠ್ಠಲ ಗೌಳಿ, ಚೇತನ ಕೊರವರ ಇದ್ದರು.