ರಾಮಮೂರ್ತಿ ನವಲಿ ಗಂಗಾವತಿ
ಎಸ್‌ಐಆರ್, ಗೃಹಲಕ್ಷ್ಮೀ ಯೋಜನೆಯ ಪುನರ್ ಪರಿಶೀಲನೆ ಘೋಷಿಸಿದ ಹಿನ್ನೆಲೆಯಲ್ಲಿ ಜನರು ಮೂಲ ಪ್ರಮಾಣ ಪತ್ರಗಳಿಗಾಗಿ ತಹಸೀಲ್ ಕಚೇರಿ ಅಲೆಯುತ್ತಿದ್ದಾರೆ. ನಗರದ ತಹಸೀಲ್ ಕಚೇರಿಯ ಪಡಸಾಲೆಯಲ್ಲಿ ಆಧಾರ್ ಕಾರ್ಡ್ ಪಡೆಯಲು ಸೋಮವಾರ ನೂಕುನುಗ್ಗಲು ನಡೆಸಿದರು.
40 ಟೋಕನ್ ವಿತರಣೆ: ನಗರ ಸೇರಿದಂತೆ ಗ್ರಾಮೀಣ ಪ್ರದೇಶದಿಂದ ಬರುವ ಜನರು ಬೆಳಗ್ಗೆಯಿಂದಲೆ ಟೋಕನ್‌ಗಾಗಿ ಕಾಯುವ ಪರಿಸ್ಥಿತಿ ಒದಗಿದೆ. ಕಚೇರಿಯ ಪಡಸಾಲೆಯಲ್ಲಿ ಕೇವಲ 40 ಜನರಿಗೆ ಮಾತ್ರ ಟೋಕನ್ ನೀಡುತ್ತಿದ್ದಾರೆ. ಈ ಟೋಕನ್ ಪಡೆಯಲು ಜನರು ಹರಸಾಹಸ ಮಾಡುವಂತಾಗಿದೆ. ಟೋಕನ್ ಪಡೆದ ಆನಂತರ ಆಧಾರ್ ಕಾರ್ಡ್‌ಗಳ ತಿದ್ದುಪಡಿಗೆ ಮತ್ತೆ ಸಾಹಸ ಮಾಡುವ ಪರಿಸ್ಥಿತಿ ಇದೆ. ಈ ಹಿಂದೆ ಪಡಸಾಲೆಯಲ್ಲಿ ಎರಡು ಕೇಂದ್ರಗಳಿದ್ದವು. ಆನಂತರ ಒಂದು ಕೇಂದ್ರ ರದ್ದುಪಡಿಸಿರುವುದರಿಂದ ಉಳಿದಿರುವ ಇನ್ನೊಂದು ಕೇಂದ್ರದ ಮೇಲೆ ಒತ್ತಡ ಹೆಚ್ಚಿದೆ. ಹೆಚ್ಚುವರಿ ಕಂಪ್ಯೂಟರ್ ಆಪರೇಟರ್ ಇದ್ದರೂ ಕೆಲಸ ಮಾಡಲು ಸಾಧ್ಯವಾಗದಂತಾಗಿದೆ.ಗಂಗಾವತಿ ತಾಲೂಕಿನಲ್ಲಿ ಗಂಗಾವತಿ, ವೆಂಕಟಗಿರಿ ಹೋಬಳಿಯಲ್ಲಿ ಆಧಾರ್ ಕಾರ್ಡ್‌ಗಳ ತಿದ್ದುಪಡಿ ಮಾಡುವ ಕೇಂದ್ರ ಇತ್ತು, ಈಗ ಅದು ರದ್ದಾಗಿದೆ. ಮರಳಿ ಹೋಬಳಿಯಲ್ಲಿ ಮಾತ್ರ ಆಧಾರ್ ಕಾರ್ಡುಗಳ ತಿದ್ದುಪಡಿ ಮಾಡುವ ಅವಕಾಶ ಇರುವುದರಿಂದ ಜನರು ದಿನ ನಿತ್ಯ ಅಲೆದಾಡುವ ಪರಿಸ್ಥಿತಿ ಒದಗಿದೆ.
ಗಂಗಾವತಿ ತಹಸೀಲ್ ಕಚೇರಿಯಲ್ಲಿ ಆಧಾರ್ ಕಾರ್ಡು ತಿದ್ದುಪಡಿಗಾಗಿ ನೂಕುನುಗ್ಗಲು ಉಂಟಾಗಿದೆ ಎಂದು ಗೊತ್ತಾಗಿದೆ. ಪ್ರಭಾರಿ ಗ್ರೇಡ್ -2 ತಹಸೀಲ್ದಾರರಾಗಿ ಇವತ್ತು ಹಾಜರಾಗಿದ್ದೇನೆ. ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ ಎಂದು ಗಂಗಾವತಿ ಪ್ರಭಾರಿ ಗ್ರೇಡ್-2 ತಹಸೀಲ್ದಾರ್ ಷಣ್ಮುಖಪ್ಪ ತಿಳಿಸಿದ್ದಾರೆ.