15ನೇ ಹಣಕಾಸು ಅನುದಾನ ವಿಳಂಬ: ಸಂಕಷ್ಟದಲ್ಲಿ ಗ್ರಾಮ ಪಂಚಾಯಿತಿಗಳು

KannadaprabhaNewsNetwork |  
Published : Jul 15, 2026, 02:30 AM IST
ಪೋಟೊ ಕ್ಯಾಪ್ಸನ್: ಮುಂಡರಗಿ ತಾಲೂಕ ಪಂಚಾಯತ ಕಚೇರಿ.ಪೋಟೊ ಕ್ಯಾಪ್ಸನ್: ಗದಗ ಜಿಲ್ಲಾ ಆಡಳಿತ ಭವನ | Kannada Prabha

ಸಾರಾಂಶ

2025- 26ನೇ ವರ್ಷದ ಅನುದಾನ ಬಿಡುಗಡೆಯಾಗಿಲ್ಲ. 2026- 27ನೇ ವರ್ಷದ ಅನುದಾನವೂ ಬರಬೇಕಿದೆ. ಕಳೆದ ಒಂದು ವರ್ಷದಿಂದ ಗ್ರಾಪಂಗಳು ಖರೀದಿ ಮಾಡಿರುವ ಸಾಮಗ್ರಿಗಳಿಗೆ ಬಿಲ್ ಪಾವತಿಸುವಂತೆ ಏಜೆನ್ಸಿಗಳು ತೀವ್ರ ಒತ್ತಡ ಹೇರುತ್ತಿವೆ.

ರಿಯಾಜಅಹ್ಮದ ದೊಡ್ಡಮನಿ

ಡಂಬಳ: ಗ್ರಾಮ ಪಂಚಾಯಿತಿಗಳಿಗೆ 15ನೇ ಹಣಕಾಸು ಯೋಜನೆಯ ಅನುದಾನ ಇನ್ನೂ ಬಿಡುಗಡೆ ಆಗದಿರುವುದು ಕಾರ್ಯನಿರ್ವಹಣೆಗೆ ಭಾರೀ ಹೊಡೆತ ಬಿದ್ದಿದೆ. ಕುಡಿಯುವ ನೀರು, ಬೀದಿದೀಪ, ರಸ್ತೆ ದುರಸ್ತಿ, ಸ್ವಚ್ಛತೆ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ಅಗತ್ಯ ಸೇವೆ ಒದಗಿಸಲು ಪಂಚಾಯಿತಿಗಳು ಪರದಾಡುವಂತಾಗಿದೆ.

2025- 26ನೇ ವರ್ಷದ ಅನುದಾನ ಬಿಡುಗಡೆಯಾಗಿಲ್ಲ. 2026- 27ನೇ ವರ್ಷದ ಅನುದಾನವೂ ಬರಬೇಕಿದೆ. ಕಳೆದ ಒಂದು ವರ್ಷದಿಂದ ಗ್ರಾಪಂಗಳು ಖರೀದಿ ಮಾಡಿರುವ ಸಾಮಗ್ರಿಗಳಿಗೆ ಬಿಲ್ ಪಾವತಿಸುವಂತೆ ಏಜೆನ್ಸಿಗಳು ತೀವ್ರ ಒತ್ತಡ ಹೇರುತ್ತಿವೆ. ಆದರೆ, ಇಂದು- ನಾಳೆ ಎಂದು ಹೇಳುತ್ತಲೇ ಸಾಗಹಾಕಲಾಗುತ್ತಿದೆ. ಇತ್ತ ಸಣ್ಣಪುಟ್ಟ ಅಭಿವೃದ್ಧಿ, ರಿಪೇರಿಯಂಥ ಕೆಲಸಗಳನ್ನು ಮಾಡದಂತಾಗಿದೆ.

15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆ ವಿಳಂಬವಾಗಿ ಗ್ರಾಮ ಪಂಚಾಯಿತಿಗಳು ಸಂಕಷ್ಟಕ್ಕೆ ಸಿಲುಕಿದೆ. ಸಂಸದರು, ಶಾಸಕರು, ಸಂಬಂಧಿಸಿದ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯವಾಗಿ ಚಕಾರ ಎತ್ತುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಜನಪ್ರತಿನಿಧಿಗಳು ಒತ್ತಡ ಹೇರಿ ಅನುದಾನ ಬಿಡುಗಡೆಗೆ ಮುಂದಾಗಬೇಕು ಎಂದು ಜನ ಒತ್ತಾಯಿಸಿದ್ದಾರೆ.

ತಂತ್ರಾಂಶದ ಸಮಸ್ಯೆ: ಇದರ ಜತೆಗೆ ಕಳೆದ ಒಂದು ವರ್ಷದಿಂದ ಇ- ಸ್ವತ್ತು ತಂತ್ರಾಂಶದಲ್ಲಿ ಉಂಟಾಗಿರುವ ನಿರಂತರ ತಾಂತ್ರಿಕ ದೋಷಗಳಿಂದ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ಸಮಸ್ಯೆ ತಂತ್ರಾಂಶದಲ್ಲಿದ್ದರೂ ಜನರ ಅಸಮಾಧಾನ ಸಿಬ್ಬಂದಿಯ ಮೇಲೆಯೇ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಲಭ್ಯವಿರುವ ಸಿಬ್ಬಂದಿಯೇ ಹೆಚ್ಚುವರಿ ಹೊಣೆಗಾರಿಕೆ ನಿಭಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಎಲ್ಲ ಸಮಸ್ಯೆಗಳ ಕುರಿತು ಮುಂಡರಗಿ ಗ್ರಾಮ ಪಂಚಾಯಿತಿ ನೌಕರರು ಮತ್ತು ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಿಗೆ ಮತ್ತು ಸಂಘದ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದು, ಇದು ರಾಜ್ಯ ಮಟ್ಟದ ಸಮಸ್ಯೆಯಾಗಿರುವುದರಿಂದ ಸರ್ಕಾರ ತುರ್ತು ಕ್ರಮ ಕೈಗೊಂಡು ಗ್ರಾಮೀಣ ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸಬೇಕು ಎಂದು ಪಿಡಿಒಗಳು ಒತ್ತಾಯಿಸಿದ್ದಾರೆ.

ಗ್ರಾಮ ಪಂಚಾಯಿತಿಗಳಿಗೆ ಅಗತ್ಯ ತಾಂತ್ರಿಕ ಬೆಂಬಲ ಒದಗಿಸುವುದು, ಇ- ಸ್ವತ್ತು ಸೇರಿದಂತೆ ಸಾರ್ವಜನಿಕ ಸೇವಾ ತಂತ್ರಾಂಶಗಳ ದೋಷ ನಿವಾರಣೆಗೆ ಜಿಲ್ಲಾ ಮಟ್ಟದ ತಾಂತ್ರಿಕ ತಂಡ ರಚಿಸುವುದು, ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವುದು, ತಾತ್ಕಾಲಿಕ ಸಿಬ್ಬಂದಿ ನಿಯೋಜನೆ ಮೂಲಕ ಕೆಲಸದ ಒತ್ತಡ ಕಡಿಮೆ ಮಾಡುವುದು ಹಾಗೂ ಅನುದಾನನನ್ನು ಕಾಲಮಿತಿಯೊಳಗೆ ಬಿಡುಗಡೆ ಮಾಡುವಂತೆ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.

ಸೇವೆ ಬಂದ್ ಎಚ್ಚರಿಕೆ: ಗ್ರಾಮ ಪಂಚಾಯಿತಿಗಳು ತೀವ್ರ ಆರ್ಥಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಗೆ ಒಳಗಾಗಿದ್ದು, ಜನರಿಗೆ ನೀರು, ಆರೋಗ್ಯ, ಬೀದಿದೀಪ ಸೇರಿದಂತೆ ಹಲವು ಸೌಲಭ್ಯ ಒದಗಿಸಲು ಪರದಾಡುವಂತಾಗಿದೆ. ಅನುದಾನ ಬಿಡುಗಡೆಯಾಗದಿದ್ದರೆ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಸೇವೆಗಳನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ(ಪಿಡಿಒ) ಸಂಘ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಅನುದಾನ ಬಿಡುಗಡೆಯಾಗಲಿ: ಗ್ರಾಪಂಗಳಿಗೆ 15ನೇ ಹಣಕಾಸು ಆಯೋಗದ ಅನುದಾನ ಬಂದಿಲ್ಲ. ಹೀಗಾಗಿ ಕರ ವಸೂಲಿ ಹಣದಲ್ಲೇ ರಸ್ತೆ, ಕುಡಿಯುವ ನೀರು, ಚರಂಡಿ, ಸಿಬ್ಬಂದಿ ವೇತನ ನಿರ್ವಹಿಸಲಾಗುತ್ತಿದೆ. ಅನುದಾನ ಬಾರದಿರುವುದರಿಂದ ಗ್ರಾಪಂಗಳ ಮೂಲಕ ಗ್ರಾಮದ ಕೆಲಸಗಳು ಬಹಳ ಕಷ್ಟವಾಗಿದೆ. ಗ್ರಾಮಸ್ಥರಿಂದ ತೀವ್ರವಾದ ತರಾಟೆಗೆ ಒಳಗಾಗುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಗೊಳಿಸಲು ಮುಂದಾಗಬೇಕು ಎಂದು ಹೆಸರು ಹೇಳಲಿಚ್ಛಿಸದ ಪಿಡಿಒ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಗಾರು ಹಂಗಾಮಿನಲ್ಲೇ ಬರಿದಾದ ಚೆಕ್‌ ಡ್ಯಾಂಗಳು
20 ವರ್ಷ ಅಲೆದರೂ ಪರಿಹಾರ ಸಿಕ್ಕಿಲ್ಲ: ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಮುಂಡವಾಡ ರೈತರ ಪ್ರತಿಭಟನೆ