ಹೊಸಪಪೇಟೆ:ಬಳ್ಳಾರಿ ನಗರದಲ್ಲಿ ಶೀಘ್ರದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಮಾಡಲು ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾ ಯುವ ಘಟಕವು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ, ಗೃಹ ಸಚಿವರು, ಬಳ್ಳಾರಿ ಜಿಲ್ಲಾಧಿಕಾರಿ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ನಗರಸಭೆ ಸದಸ್ಯ ತಾರಿಹಳ್ಳಿ ಜಂಬುನಾಥ, ಮುಂಖಡರಾದ ಗುಜ್ಜಲ್ ಗಣೇಶ್, ಎನ್.ವೆಂಕಟೇಶ್ ಮಾತನಾಡಿ, ಕಳೆದ ಕೆಲ ತಿಂಗಳ ಹಿಂದೆ ಪ್ರತಿಷ್ಠಾಪನೆಗೊಳ್ಳಬೇಕಿದ್ದ ವಾಲ್ಮೀಕಿ ಪ್ರತಿಮೆ ಕಾರ್ಯಕ್ರಮ ರಾಜಕೀಯ ಕಾರಣಗಳಿಗಾಗಿ ಮುಂದೂಡಲಾಗಿತ್ತು. ಇದರಲ್ಲಿ ಕೆಲ ಮುಖಂಡರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಮುಂದೂಡುತ್ತಾ ಬರುತ್ತಿರುವುದನ್ನು ವಾಲ್ಮೀಕಿ ನಾಯಕ ಮಹಾಸಭಾದ ಯುವ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದರು.
ಪ್ರತಿಭಟನೆಯಲ್ಲಿ ವಾಲ್ಮೀಕಿ ನಾಯಕ ಮಹಾಸಭಾದ ಯುವ ಘಟಕದ ಜಿಲ್ಲಾಧ್ಯಕ್ಷ ಕಿರಣ್ ಗುಜ್ಜಲ್, ಪ್ರಧಾನ ಕಾರ್ಯದರ್ಶಿ ವ್ಯಾಸರಾಜ, ಯುವ ಮುಖಂಡ ಕಾಸಟಿ ಮಂಜುನಾಥ ಮಾತನಾಡಿ, ಬಳ್ಳಾರಿಯ ರಾಜಕೀಯ ಕೆಸರೆರಚಾಟದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಲೋಕಾರ್ಪಣೆ ವಿಳಂಬ ಮಾಡುವುದು ಸರಿಯಲ್ಲ. ಲೋಕಕ್ಕೆ ರಾಮನನ್ನು ಪರಿಚಯಿಸಿದ ಪವಿತ್ರ ರಾಮಾಯಣ ಗ್ರಂಥವನ್ನು ಬರೆದವರು ಆದಿಕವಿ ಮಹರ್ಷಿ ವಾಲ್ಮೀಕಿ. ಅವರ ಪುತ್ಥಳಿ ಲೋಕಾರ್ಪಣೆ ಸಮಾರಂಭವು ಈ ಹಿಂದೆ ನಿಗದಿಗೊಂಡು ಬಳ್ಳಾರಿಯಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಹಾಗೂ ದೊಂಬಿಯ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಈಗ ಎಲ್ಲವೂ ಸರಿಯಾಗಿದೆ. ಪರಿಸ್ಥಿತಿ ತಿಳಿಯಾಗಿದೆ. ಇಷ್ಟಾದರೂ ಪುತ್ಥಳಿ ಅನಾವರಣಕ್ಕೆ ಬಳ್ಳಾರಿಯ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ ಎಂದರು.
ಪ್ರತಿಭಟನಯಲ್ಲಿ ಸೂರಿ ಬಂಗಾರು, ಜೆ.ಡಿ. ಮಂಜುನಾಥ, ಪ್ರಮೋದ್ ಬಾವಿಕಟ್ಟಿ, ಎನ್.ವೆಂಕಟೇಶ್, ಎರಿಸ್ವಾಮಿ, ತಳವಾರ ಮಂಜುನಾಥ, ಲಕ್ಷ್ಮಣ, ತಿಪ್ಪೇಸ್ವಾಮಿ, ಬಾಣದ ಗೋಪಿ, ಕೆ.ಭರತಕುಮಾರ್, ಜಯಣ್ಣ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸ್ವೀಕರಿಸಿದರು.