ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಗ್ರಹಣ ಸಮಾರಂಭ ಉದ್ಘಾಟನೆ
ಯಾವುದೇ ಗುರಿಯನ್ನು ಯಶಸ್ವಿಯಾಗಿ ಸಾಧಿಸಲು ಮತ್ತು ಯಾವುದೇ ಗೊಂದಲವಿಲ್ಲದೆ ಕಾರ್ಯನಿರ್ವಹಿಸಲು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಉಳಿದ ಸಂಘಟನೆಗಳಿಗೆ ಮಾದರಿಯಾಗಿ ಬೆಳೆಯಲಿ ಎಂದು ತಹಸಿಲ್ದಾರ್ ಪ್ರವೀಣ್ ಕರಾಂಡೆ ಹೇಳಿದರು.
ಪಪಂ ಸಭಾಭವನದಲ್ಲಿ ನಡೆದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯಾವುದೇ ಸಂಘಟನೆ ಏಕಾಂಗಿಯಾಗಿ ಕೆಲಸ ಮಾಡುವುದಕ್ಕಿಂತ ಸಂಘಟನೆಯ ಎಲ್ಲ ಪದಾಧಿಕಾರಿಗಳು ಒಟ್ಟಾಗಿ ಸೇರಿ ಕೆಲಸ ಮಾಡಿದಾಗ ಆ ಸಂಘಟನೆ ಉಳಿದೆಲ್ಲ ಸಂಘಟನೆಯನ್ನು ಮೀರಿ ನಿಲ್ಲಲು ಸಾಧ್ಯ. ಶಿಕ್ಷಕರ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಾಂಘಿಕ ಹೋರಾಟದ ಅವಶ್ಯಕತೆ ಇದೆ. ಓರ್ವ ಕ್ರಿಯಾಶೀಲ ಶಿಕ್ಷಕ ಸುದೀಶ ನಾಯ್ಕರವರಿಗೆ ಅಧ್ಯಕ್ಷ ಪಟ್ಟ ಒಲಿದಿರುವುದು ಅವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿಕ್ಷಕ ಸಂಘದ ಅಧ್ಯಕ್ಷ ಸುದೀಶ ನಾಯ್ಕ ಮಾತನಾಡಿ, ತಾಲೂಕಿನ ವಿವಿಧ ಇಲಾಖೆಗಳ ಮತ್ತು ವ್ಯಕ್ತಿಗಳ ನಡುವೆ ಸಾಮರಸ್ಯ ಮತ್ತು ಸಮನ್ವತೆ ಕಾಪಾಡಿಕೊಳ್ಳುವುದು ಸಂಘದ ಜವಾಬ್ದಾರಿ ಎಂದರು.
ಇದೇ ಸಂದರ್ಭ ನಿಕಟ ಪೂರ್ವ ಜಿಲ್ಲಾಧ್ಯಕ್ಷ ನಾರಾಯಣ ಗಾಂವಕರ, ಕೋಟೆಬೈಲ್ ಸರಕಾರಿ ಪ್ರೌಢಶಾಲಾ ಮುಖ್ಯಾಧ್ಯಾಪಕ ಸುರೇಶ ನಾಯ್ಕ ಮತ್ತು ಗೆರುಸೊಪ್ಪ ಪ್ರೌಢಶಾಲೆಯ ಎಸ್.ಡಿ.ಎ. ರಾಘವೇಂದ್ರ ನಾಯ್ಕ ಮತ್ತು ಎಸ್.ಎಂ.ಭಟ್ಟರನ್ನು ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ಲಕ್ಷ್ಮಿ ಎಚ್. ಪ್ರಾರ್ಥಿಸಿದರು. ತಾಲೂಕಾ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಹೆಗಡೆ ಸ್ವಾಗತಿಸಿದರು. ಉಪಾಧ್ಯಕ್ಷ ಅಣ್ಣಪ್ಪ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಸಹ ಕಾರ್ಯದರ್ಶಿ ಶಿಲ್ಪಾ ಭಂಡಾರಿ ವಂದಿಸಿದರು. ಶಿಕ್ಷಕ ಸಂಘದ ಉದಯ ನಾಯ್ಕ ನಿರೂಪಿಸಿದರು.