ಕೇಜ್ರಿವಾಲ್‌ಗೆ ಸುಪ್ರೀಂ ಜಾಮೀನು ಆಮ್‌ ಆದ್ಮಿ ಪಕ್ಷದಿಂದ ಸಂಭ್ರಮ

KannadaprabhaNewsNetwork |  
Published : May 11, 2024, 01:35 AM IST
AAP 3 | Kannada Prabha

ಸಾರಾಂಶ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ್ದಕ್ಕೆ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿರುವುದು ಸತ್ಯಕ್ಕೆ ಸಂದ ಗೆಲುವಾಗಿದೆ ಎಂದು ಆಮ್‌ಅದ್ಮಿ ಪಕ್ಷದ (ಎಎಪಿ) ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಕೇಜ್ರಿವಾಲ್ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವದ ಗೆಲುವಾಗಿದೆ. ಪ್ರಧಾನಿ ನರೇಂದ್ರ ಮೋದಿಯ ಸೋಲಿನ ಮುನ್ಸೂಚನೆಯಾಗಿದೆ. ಜೈಲಿನ ಕಂಬಿಗಳು ಮುರಿದಿದ್ದು, ಸರ್ವಾಧಿಕಾರಿಗಳ ಸೊಕ್ಕು ಅಡಗಿದೆ. ಈ ಬಾರಿಯ ಚುನಾವಣೆಯಲ್ಲಿ ಕೇಜ್ರಿವಾಲ್ ಅಲೆಯನ್ನು ತಡೆಯಲು ಪ್ರಧಾನಿ ಮೋದಿಗೆ ಇನ್ನಾವುದೇ ದಾರಿ ಉಳಿದಿಲ್ಲ. ಇಂಡಿಯಾ ಒಕ್ಕೂಟದ ಗೆಲುವನ್ನು ತಡೆಯುವ ಮೋದಿಯವರ ಹುನ್ನಾರ ನುಚ್ಚುನೂರಾಗಿದೆ ಎಂದು ತಿಳಿಸಿದರು.

ದೆಹಲಿಯ ಜನರಲ್ಲಿ ಮಿಂಚಿನ ಸಂಚಾರವಾಗಿದೆ. ಮೇ 25ರಂದು ದೆಹಲಿಯಲ್ಲಿ ನಡೆಯುವ ಚುನಾವಣೆಯಲ್ಲಿ, ಕೇಜ್ರಿವಾಲ್ ಅವರ ಉಪಸ್ಥಿತಿಯಿಂದ ಇಂಡಿಯಾ ಒಕ್ಕೂಟವು ಏಳಕ್ಕೆ ಏಳು ಸ್ಥಾನವನ್ನು ಗೆಲ್ಲಲಿದೆ. ದೇಶದ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಪಾರ ನಂಬಿಕೆಯನ್ನು ಹೊಂದಿದ್ದೇವೆ. ನಮ್ಮ ನಿರೀಕ್ಷೆಯಂತೆ ಕೇಜ್ರಿವಾಲ್ ಅವರಿಗೆ ಜಾಮೀನು ಸಿಕ್ಕಿದೆ. ಕೇಜ್ರಿವಾಲ್ ಬಂಧನ ಪ್ರಧಾನಿ ಮೋದಿಯವರ ದೊಡ್ಡ ಹುನ್ನಾರ ಎಂಬುದು ಜಗಜ್ಜಾಹೀರಾಗಿದೆ. ಚುನಾವಣೆಯಲ್ಲಿ ಎಎಪಿಯನ್ನು ಕಟ್ಟಿಹಾಕುವ ಸಲುವಾಗಿ ಚುನಾವಣೆಯ ಹೊಸ್ತಿಲಲ್ಲಿ ಕೇಜ್ರಿವಾಲ್ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಲಾಗಿತ್ತು ಎಂಬ ಸತ್ಯ ದೇಶದ ಜನತೆಗೆ ಅರಿವಾಗಿದೆ. ಕೇಜ್ರಿವಾಲ್ ಅವರನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವದ ವಿರುದ್ಧ ಅಣಕವಾಡಿದ್ದ ನರೇಂದ್ರ ಮೋದಿಗೆ ತಕ್ಕ ಶಾಸ್ತಿಯಾಗುವ ದಿನಗಳು ಹತ್ತಿರವಾಗಿವೆ ಎಂದು ಟೀಕಾಪ್ರಹಾರ ನಡೆಸಿದರು.

ಪಕ್ಷದ ಮುಖಂಡರಾದ ಮೋಹನ್ ದಾಸರಿ, ಡಾ। ಸತೀಶ್ ಕುಮಾರ್ ಉಪಸ್ಥಿತರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ