ಅಘನಾಶಿನಿಗೆ ಆರತಿ ಶ್ಲಾಘನೀಯ ಕಾರ್ಯ: ಅಭಿನವ ಹಾಲಸ್ವಾಮೀಜಿ

KannadaprabhaNewsNetwork | Published : Feb 18, 2025 12:33 AM

ಸಾರಾಂಶ

ಅಘನಾಶಿನಿ ಆರತಿ ಮೂಲಕ ನದಿಗೆ ಕೃತಜ್ಞತೆ ಸಲ್ಲಿಸುವ ಭಾರತೀಯ ಸಂಸ್ಕೃತಿಯನ್ನು ಸಮಾಜದಲ್ಲಿ ಪ್ರೇರೇಪಿಸುತ್ತಿರುವ ಯುವ ಬ್ರಿಗೇಡ್ ಕಾರ್ಯ ಶ್ಲಾಘನೀಯ

ಕುಮಟಾ: ಮಮತಾಮಯಿ ತಾಯಿಯ ಅಕ್ಕರೆ, ವಾತ್ಸಲ್ಯದಂತೆ ಅಘನಾಶಿನಿ ನದಿ ಕೂಡ ತನ್ನ ಹರಿವಿನುದ್ದಕ್ಕೂ ಜನರ ಜೀವನದಿಯಾಗಿ ಮಾತೆಯಾಗಿ, ಸಲಹುತ್ತಿದ್ದಾಳೆ. ಅಘನಾಶಿನಿ ಆರತಿ ಮೂಲಕ ನದಿಗೆ ಕೃತಜ್ಞತೆ ಸಲ್ಲಿಸುವ ಭಾರತೀಯ ಸಂಸ್ಕೃತಿಯನ್ನು ಸಮಾಜದಲ್ಲಿ ಪ್ರೇರೇಪಿಸುತ್ತಿರುವ ಯುವ ಬ್ರಿಗೇಡ್ ಕಾರ್ಯ ಶ್ಲಾಘನೀಯ ಎಂದು ಹಿರೇಹಡಗಲಿ ಮಠದ ಅಭಿನವ ಹಾಲಸ್ವಾಮೀಜಿ ನುಡಿದರು.

ತಾಲೂಕಿನ ದಿವಗಿಯಲ್ಲಿ ಭಾನುವಾರ ರಾತ್ರಿ ಯುವ ಬ್ರಿಗೇಡ್ ವತಿಯಿಂದ ಅಘನಾಶಿನಿ ಆರತಿ ಕಾರ್ಯಕ್ರಮವನ್ನು ಹನುಮಾನ ಧ್ವಜಾರೋಹಣ ನೆರವೇರಿಸಿ, ಭಾರತ ಮಾತೆಯೆದುರು ಜ್ಯೋತಿಗೆ ತೈಲಪೂರಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀ, ತಾಯಂದಿರು ಮಕ್ಕಳನ್ನು ಯುವಾ ಬ್ರಿಗೇಡ್‌ನಂತಹ ದೇಶಭಕ್ತ ಸಂಘಟನೆಗಳೊಂದಿಗೆ ಬೆರೆಸಬೇಕು ಎಂದರು.

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಜಗತ್ತಿನಲ್ಲಿ ನದಿಗಳ ಪಾತ್ರದಲ್ಲೇ ಅನೇಕ ನಾಗರಿಕತೆ ಹಾಗೂ ವೇದಗಳ ಜನನ ಆಗಿದೆ. ಇಂತಹ ನದಿಗಳ ಉಳಿವಿಗಾಗಿ ಯುವ ಬ್ರಿಗೇಡ್ ಅನೇಕ ಬಗೆಯಲ್ಲಿ ಕಾರ್ಯ ಚಟುವಟಿಕೆ ನಡೆಸುತ್ತಿದ್ದು, ಕಳೆದ ೩ ವರ್ಷದಿಂದ ಕುಮಟಾ ಯುವ ಬ್ರಿಗೇಡ್ ತಂಡ ನದಿಗೆ ಆರತಿ ಸಮರ್ಪಣೆ ಹಮ್ಮಿಕೊಳ್ಳುತ್ತಾ ಬಂದಿದೆ. ಇದರಿಂದ ಜನರಲ್ಲಿ ನದಿಯ ಬಗ್ಗೆ ಅಭಿಮಾನ ಮತ್ತು ಕಾಳಜಿ ಮೂಡುವುದಕ್ಕೆ ಕಾರಣವಾಗಿದೆ ಎಂದರು.

ಮೂಡುಬಿದಿರೆ ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ಮಾಡಿ, ನಾವು ಧರ್ಮಕ್ಕಾಗಿ ಇಂದು ಜಾತಿ, ಪಕ್ಷಗಳನ್ನು ಬಿಟ್ಟು ನಿಲ್ಲಬೇಕಾಗಿದೆ. ನಮ್ಮಲ್ಲಿ ಒಗ್ಗಟ್ಟು ಇಲ್ಲವಾದರೆ ಭವಿಷ್ಯದಲ್ಲಿ ತೀರಾ ಕಷ್ಟ ಅನುಭವಿಸಬೇಕಾಗಬಹುದು. ಯುವ ಬ್ರಿಗೇಡ್ ಶಕ್ತಿ ಇನ್ನು ಹೆಚ್ಚಲಿ. ಎಲ್ಲರಿಗೂ ಒಳ್ಳೆಯದಾಗಲೆಂದು ಹಾರೈಸಿದರು.

ದಿವಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗ್ಗು ಭಟ್ ಶುಭ ಹಾರೈಸಿದರು. ದಿವಗಿ ಗ್ರಾಮದ ಕುರಿತು ಹೇಮಂತಕುಮಾರ ಗಾಂವಕರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ಕುಮಟಾ ತಂಡದ ಕಳೆದ ೧೦ ವರ್ಷಗಳ ಕಾರ್ಯ ವೈವಿಧ್ಯದ ವಿಡಿಯೋ ಪ್ರದರ್ಶಿಸಲಾಯಿತು. ಬಳಿಕ ತರಬೇತಿ ಪಡೆದ ಯುವ ಬ್ರಿಗೇಡ್ ಸದಸ್ಯರು ಅಘನಾಶಿನಿ ನದಿಗೆ ಭವ್ಯ ರಂಗಸಜ್ಜಿಕೆಯಲ್ಲಿ ಆರತಿ ಸಮರ್ಪಿಸಿದರು.

ಸುಭಾಸ ಅಂಬಿಗ ಸ್ವಾಗತಿಸಿದರು. ಯುವ ಬ್ರಿಗೇಡ್ ಸದಸ್ಯರಾದ ಲಕ್ಷ್ಮೀಕಾಂತ ಮುಕ್ರಿ ಪ್ರಾಸ್ತಾವಿಕ ಮಾತನಾಡಿದರು. ಯುವ ಬ್ರಿಗೇಡ್‌ನ ಗೌರೀಶ ನಾಯ್ಕ ನಿರೂಪಿಸಿದರು. ಯುವ ಬ್ರಿಗೇಡ್ ಸದಸ್ಯರಾದ ರವೀಶ ನಾಯ್ಕ, ಪ್ರಕಾಶ ನಾಯ್ಕ, ಸಚಿನ್ ಭಂಡಾರಿ, ಚಿದಾನಂದ ಹರಿಕಾಂತ, ಗಣಪತಿ ಪಟಗಾರ, ರಾಘವೇಂದ್ರ ಎಲ್.ಜಿ., ಗಿರೀಶ ಪಟಗಾರ, ಮಂಜುನಾಥ ಗೌಡ, ಜ್ಯೋತಿ ನಾಯ್ಕ, ಯಮುನಾ ಅಂಬಿಗ, ಸ್ಥಳೀಯರಾದ ರಾಘವೇಂದ್ರ ದೇಶ ಭಂಡಾರಿ, ಜಟ್ಟಿ ಮುಕ್ರಿ, ವಿನೋದ ಅಂಬಿಗ, ಆನಂದು ದೇಶಭಂಡಾರಿ, ವಿವೇಕ ನಾಯ್ಕ ಇನ್ನಿತರರು ಇದ್ದರು.

Share this article