ದೇವರಾಜ ಅರಸು ಅವರ ಧೀರ್ಘಾವಧಿ ಮುಖ್ಯಮಂತ್ರಿಯ ದಾಖಲೆಯನ್ನು ಮುರಿದ ಸಿಎಂ ಸಿದ್ದರಾಮಯ್ಯ ಅವರಿಗೆ ಶುಭ ಕೋರಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ‘ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ. ಐ ವಿಶ್‌ ಹಿಮ್‌ ಆಲ್ ದ ಬೆಸ್ಟ್‌, ಗುಡ್‌ಲಕ್‌’ ಎಂದು ಹಾರೈಸಿದ್ದಾರೆ.

ಬೆಂಗಳೂರು : ದೇವರಾಜ ಅರಸು ಅವರ ಧೀರ್ಘಾವಧಿ ಮುಖ್ಯಮಂತ್ರಿಯ ದಾಖಲೆಯನ್ನು ಮುರಿದ ಸಿಎಂ ಸಿದ್ದರಾಮಯ್ಯ ಅವರಿಗೆ ಶುಭ ಕೋರಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ‘ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ. ಐ ವಿಶ್‌ ಹಿಮ್‌ ಆಲ್ ದ ಬೆಸ್ಟ್‌, ಗುಡ್‌ಲಕ್‌’ ಎಂದು ಹಾರೈಸಿದ್ದಾರೆ.

ಸಿದ್ದರಾಮಯ್ಯ ಅವರ ದಾಖಲೆ ಮತ್ತು ಪೂರ್ಣಾವಧಿಗೆ ತಾವೇ ಸಿಎಂ ಸ್ಥಾನದಲ್ಲಿರುವ ಕುರಿತು ವಿಶ್ವಾಸ ವ್ಯಕ್ತಪಡಿಸಿರುವ ಸಿಎಂ ನೀಡಿರುವ ಹೇಳಿಕೆ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರಿಗೆ ಶುಭ ಹಾರೈಸುತ್ತೇನೆ. ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ನಮ್ಮಲ್ಲಿ ಯಾರಿಗೂ, ಯಾವುದೇ ಗೊಂದಲವಿಲ್ಲ. ಸಿದ್ದರಾಮಯ್ಯ ಅವರಿಗೆ ಯಶಸ್ಸು ಸಿಗಲಿ. ಅವರ ಆರೋಗ್ಯ ವೃದ್ಧಿಯಾಗಲಿದೆ. ಜನರ ಸೇವೆ ಮಾಡುವ ಮತ್ತಷ್ಟು ಅವಕಾಶ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಕುಮಾರಸ್ವಾಮಿ ಜೇಬಲ್ಲೇ ಐಟಿ ಇಲಾಖೆಯಿದೆ:

ಬಳ್ಳಾರಿಯಲ್ಲಿ ಮೃತಪಟ್ಟ ಕಾಂಗ್ರೆಸ್‌ಕಾರ್ಯಕರ್ತನ ಕುಟುಂಬಕ್ಕೆ ನೀಡಿದ ಪರಿಹಾರದ ಹಣದ ಮೂಲದ ಕುರಿತು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಎತ್ತಿರುವ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ಆದಾಯ ತೆರಿಗೆ ಇಲಾಖೆ ಸೇರಿದಂತೆ ಇತರ ಎಲ್ಲ ಇಲಾಖೆಗಳು ವಿರೋಧ ಪಕ್ಷಗಳ ಬಳಿ ಇದೆಯೇ. ಅವೆಲ್ಲವೂ ಕುಮಾರಸ್ವಾಮಿ ಜೇಬಿನಲ್ಲೇ ಇದಾವಲ್ಲ. ಕಾರ್ಯಕರ್ತನ ಕುಟುಂಬಕ್ಕೆ ನೀಡಲಾದ ಪರಿಹಾರ ಹಣದ ಬಗ್ಗೆ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ಬಳಿ ಮಾತನಾಡುತ್ತೇನೆ ಎಂದು ಹೇಳಿದರು.

ಸೋನಿಯಾ ಗಾಂಧಿ ಗುಣಮುಖರಾಗಲಿ:

ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಅನಾರೋಗ್ಯ ಕಾರಣದಿಂದ ಸೋನಿಯಾ ಗಾಂಧಿ ಅವರು ಶೀಘ್ರ ಗುಣಮುಖರಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ ಎಂದರು.