ಕರ್ನಾಟಕದ ಸುದೀರ್ಘ ಅವಧಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಇದುವರೆಗೆ ಎರಡು ಅವಧಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಈ ಹುದ್ದೆಯಲ್ಲಿ 2793 ದಿನಗಳನ್ನು ಪೂರೈಸುವ ಮೂಲಕ ಅತಿ ಹೆಚ್ಚು ಕಾಲ ನಾಡಿನ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಯಾಗಿ ದಾಖಲೆ ಸೃಷ್ಟಿಸಿದ್ದಾರೆ.

ಬೆಂಗಳೂರು : ಕರ್ನಾಟಕದ ಸುದೀರ್ಘ ಅವಧಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಇದುವರೆಗೆ ಎರಡು ಅವಧಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಈ ಹುದ್ದೆಯಲ್ಲಿ 2793 ದಿನಗಳನ್ನು ಪೂರೈಸುವ ಮೂಲಕ ಅತಿ ಹೆಚ್ಚು ಕಾಲ ನಾಡಿನ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಯಾಗಿ ದಾಖಲೆ ಸೃಷ್ಟಿಸಿದ್ದಾರೆ.

ಇದುವರೆಗಿನ ಅತಿ ಸುದೀರ್ಘ ಅವಧಿಯವರೆಗೆ ಮುಖ್ಯಮಂತ್ರಿಯಾಗಿದ್ದ ದಿ. ದೇವರಾಜ ಅರಸು ಅವರ ದಾಖಲೆ ಮುರಿದಿದೆ. ಅರಸು ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಎರಡು ಅವಧಿಯಲ್ಲಿ ಒಟ್ಟಾರೆ 2792 ದಿನ ಆಡಳಿತ ನಡೆಸಿದ್ದರು. ಜ.6ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಅವಧಿಯ ಮುಖ್ಯಮಂತ್ರಿ ಹುದ್ದೆಯಲ್ಲಿ 2792 ದಿನ ಪೂರೈಸಿದ್ದು, ಜು.7ಕ್ಕೆ ಸಿದ್ದರಾಮಯ್ಯ ನಾಡಿನ ಸುದೀರ್ಘ ಅ‍ವಧಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದೇವರಾಜ ಅರಸು ಅವರು 1972ರ ಮಾ.20 ರಂದು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿದಿದ್ದರು. 1977ರ ಡಿ.31ರವರೆಗೆ ಅಂದರೆ 5 ವರ್ಷ 286 ದಿನಗಳ ಕಾಲ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದರು.

ಬಳಿಕ 1978ರ ಫೆ.28ರಿಂದ 1980ರ ಜ.12ರವರೆಗೆ ಅಂದರೆ 1 ವರ್ಷ 318 ದಿನಗಳ ಕಾಲ ಸೇರಿ ಒಟ್ಟು 2,792 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು.

ನಾಲ್ಕೂವರೆ ದಶಕದ ಬಳಿಕ ಅಳಿಯಿತು ಅರಸು ದಾಖಲೆ:

2013ರ ಮೇ 13 ರಂದು ಮೊದಲ ಬಾರಿಗೆ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಅವರು 2018ರ ಮೇ 17ರವರೆಗೆ ಅಂದರೆ 5 ವರ್ಷ 4 ದಿನ (1,829) ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ 2023ರ ಮೇ 20 ರಂದು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯ ಅವರು 964 ದಿನ ಪೂರೈಸಿದ್ದು, ಜ.7 ಕ್ಕೆ ಒಟ್ಟು 2793 ದಿನ ಅಧಿಕಾರ ನಡೆಸುವ ಮೂಲಕ ನಾಲ್ಕೂವರೆ ದಶಕಗಳ ಬಳಿಕ ದೇವರಾಜ ಅರಸು ಅವರ ದಾಖಲೆ ಮುರಿದಿದ್ದಾರೆ.

ಬಜೆಟ್ ಮಂಡನೆಯಲ್ಲೂ ಸಿದ್ದರಾಮಯ್ಯ ಈಗಾಗಲೇ ಎಲ್ಲರಿಗಿಂತ ಮುಂದಿದ್ದು, ಬರೋಬ್ಬರಿ 16 ಬಜೆಟ್‌ಗಳನ್ನು ಮಂಡನೆ ಮಾಡಿದ್ದಾರೆ.

ಅಭಿಮಾನಿಗಳಿಂದ ಸಂಭ್ರಮ:

ಸಿದ್ದರಾಮಯ್ಯ ಅಭಿಮಾನಿಗಳು ಜ.6ಕ್ಕೆ ಅರಸು ಅವರ ದಾಖಲೆ ಸರಿಗಟ್ಟಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅವರ ಅಭಿಮಾನಿಗಳು ಸಿಹಿ ಹಂಚಿ, ಫ್ಲೆಕ್ಸ್‌ ಕಟ್ಟಿ ಕಾರ್ಯಕ್ರಮಗಳನ್ನು ನಡೆಸಿ ಸಂಭ್ರಮಿಸಿದರು. ನೆಲಮಂಗಲದ ಭಕ್ತನಪಾಳ್ಯದಲ್ಲಿ ಯುವ ಅಹಿಂದ ವತಿಯಿಂದ ‘ನಾಟಿ ಕೋಳಿ ಔತಣಕೂಟ’ ಆಯೋಜಿಸುವ ಮೂಲಕ ವಿಭಿನ್ನವಾಗಿ ಸಂಭ್ರಮಾಚರಣೆ ಮಾಡಿದರು. ಈ ಸಂಭ್ರಮಾಚರಣೆ ಬುಧವಾರವೂ ಮುಂದುವರೆಯುವ ಸಾಧ್ಯತೆಯಿದೆ.

ರಾಜ್ಯದ ಅತಿ ಸುದೀರ್ಘ ಸಿಎಂ

ಸಿದ್ದರಾಮಯ್ಯ 2793 ದಿನ

ದೇವರಾಜ ಅರಸ್‌ 2792 ದಿನ

- 4.5 ದಶಕ ಬಳಿಕ ಅಳಿಯಿತು ಅರಸು ರೆಕಾರ್ಡ್‌ 

 ದಾಖಲೆ ಬಜೆಟ್‌ ಮಂಡಿಸಿದ್ದ ಸಿದ್ದುಗೆ ಮತ್ತೊಂದು ಗರಿ