ಮಂಗಳೂರು: ರೋಟರಿ ಕ್ಲಬ್ ದೇರಳಕಟ್ಟೆ, ಸೀ ಸೈಡ್ ಮಂಗಳೂರು, ಮಂಗಳೂರು ಸಿಟಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಟಿದ ನೆನಪು ಸಾಂಸ್ಕೃತಿಕ ಕಾರ್ಯಕ್ರಮ ನಗರದ ಲಯನ್ಸ್ ಸೇವಾ ಅಶೋಕ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು.
ಬಳಿಕ ಮಾತನಾಡಿದ ದೇವದಾಸ್ ಕಾಪಿಕಾಡ್, ತುಳುನಾಡಿನ ಸಾಂಸ್ಕೃತಿಕ ದಿನಾಚರಣೆಯಾದ ಆಟಿ ಮಾಸಕ್ಕೆ ವೈಜ್ಞಾನಿಕ ಮಹತ್ವವಿದೆ. ತುಳುನಾಡಿನ ಜನರು ಈ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು. ಸರ್ಕಾರವು ತುಳು ಭಾಷೆಗೆ ಮಾನ್ಯತೆ ನೀಡಬೇಕು ಎಂದೂ ಇದೇ ಸಂದರ್ಭ ಅವರು ಒತ್ತಾಯಿಸಿದರು, ಹಾಗೂ ರೋಟರಿ ಸಂಸ್ಥೆಗಳ ನಿಸ್ವಾರ್ಥ ಸಮಾಜ ಸೇವೆಯನ್ನು ಪ್ರಶಂಸಿಸಿದರು.ಈ ಸಂದರ್ಭದಲ್ಲಿ ದೇವದಾಸ್ ಕಾಪಿಕಾಡ್ ಮತ್ತು ತಿಮ್ಮಪ್ಪ ಕುಲಾಲ್ ಅವರು ತುಳು ಕಲಾ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.
ಸಹಾಯಕ ಗವರ್ನರ್ ಡಾ. ರವಿಶಂಕರ್ ರಾವ್ ಅವರು ರೋಶನ್ ಮಥಾಯಿಸ್ ಅವರನ್ನು ಸಂಸ್ಥೆಯ ನೂತನ ಸದಸ್ಯರನ್ನಾಗಿ ಸೇರ್ಪಡೆಗೊಳಿಸುವ ವಿಧಿ ವಿಧಾನಗಳನ್ನು ನೆರವೇರಿಸಿದರು. ರೋಟರಿ ಮಂಗಳೂರು ಸಿಟಿ ಕಾರ್ಯದರ್ಶಿ ಪದ್ಮನಾಭ ನಾಯಕ್ ಅವರಿಗೆ ಪೌಲ್ ಹ್ಯಾರಿಸ್ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಸಂಸ್ಥೆಯ ಮೂರೂ ಕಾರ್ಯದರ್ಶಿಗಳು ಸಂಸ್ಥೆಯ ಮಾಸಿಕ ವರದಿಯನ್ನು ಮಂಡಿಸಿದರು.ವೇದಿಕೆಯಲ್ಲಿ ರೋಟರಿ ವಲಯ ಪ್ರತಿನಿಧಿಗಳಾದ ಪ್ರಶಾಂತ್ ರೈ, ಶಿವರಾಮ್ ಮತ್ತು ರೋಟರಿ ಸಿಟಿ ಸಂಸ್ಥೆಯ ಸ್ಥಾಪನಾ ಅಧ್ಯಕ್ಷರಾದ ಡಾ. ರಂಜನ್ ಇದ್ದರು. ಸಿಟಿ ಸಂಸ್ಥೆ ಅಧ್ಯಕ್ಷೆ ಸಜ್ಞಾ ಭಾಸ್ಕರ್ ಸ್ವಾಗತಿಸಿದರು. ದೇರಳಕಟ್ಟೆ ಸಂಸ್ಥೆ ಅಧ್ಯಕ್ಷೆ ಅನಿತಾ ರವಿಶಂಕರ್ ವಂದಿಸಿದರು. ಸೀ ಸೈಡ್ ಸಂಸ್ಥೆ ಅಧ್ಯಕ್ಷ ಅಶೋಕ್ ನಿರೂಪಿಸಿದರು.ಈ ಸಂದರ್ಭದಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಟಿ ದಿನದ ವಿಶೇಷ ಖಾದ್ಯ, ತಿಂಡಿ- ತಿನಿಸುಗಳನ್ನು ವಿತರಿಸಲಾಯಿತು.