ಪ್ಲಾಸ್ಟಿಕ್ ತ್ಯಜಿಸಿ - ಪರಿಸರ ಸಂರಕ್ಷಿಸಿ : ಬಿ.ವಿ. ಅಶ್ವಿಜ

KannadaprabhaNewsNetwork |  
Published : Nov 25, 2024, 01:04 AM IST
“ವನಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ” ಕಾರ್ಯಕ್ರಮಉದ್ಘಾಟಿಸಿದ ಪಾಲಿಕೆ ಆಯುಕ್ತರಾದ ಅಶ್ವಿಜ  | Kannada Prabha

ಸಾರಾಂಶ

ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತ್ಯಜಿಸಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವ ಮೂಲಕ ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದು ಮಹಾನಗರ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತ್ಯಜಿಸಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವ ಮೂಲಕ ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದು ಮಹಾನಗರ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ತಿಳಿಸಿದರು.ನಗರದ ಡಾ: ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಹಾಗೂ ತುಮಕೂರು ವಿಜ್ಞಾನ ಕೇಂದ್ರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವನ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪರಿಸರ ಮಾಲಿನ್ಯದಿಂದ ಜೀವ ಸಂಕುಲಗಳಿಗೆ ಹಾನಿ ಉಂಟಾಗುತ್ತಿದ್ದು, ಪ್ಲಾಸ್ಟಿಕ್ ಬದಲಿಗೆ ಜೈವಿಕ ವಸ್ತುಗಳನ್ನು ಬಳಸಬೇಕೆಂದು ಕರೆ ನೀಡಿದರು. ಅರಣ್ಯ ನಾಶದಿಂದ ಪರಿಸರ ಅಸಮತೋಲನ ಉಂಟಾಗಿ ಚಂಡಮಾರುತ, ಭೂಕಂಪ, ಅತೀವೃಷ್ಠಿ, ಅನಾವೃಷ್ಠಿಗೆ ಕಾರಣವಾಗಿ ಜೀವಸಂಕುಲಗಳು ಅಳಿವಿನಂಚಿಗೆ ತಲುಪುತ್ತಿವೆ. ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡುತ್ತಿದ್ದಾನೆ. ಉತ್ತಮ ಪರಿಸರ ಕಾಪಾಡುವ ಮೂಲಕ ಮುಂದಿನ ಪೀಳಿಗೆಗೆ ಶುದ್ಧ ನೀರು, ಗಾಳಿ, ಆಹಾರ ದೊರೆಯುವಂತೆ ಮಾಡಬೇಕೆಂದು ತಿಳಿಸಿದರು. ಸಾರ್ವಜನಿಕರು ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿಕಸ-ಒಣಕಸವನ್ನು ಬೇರ್ಪಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ದಿನನಿತ್ಯ ಚಟುವಟಿಕೆಗಳಲ್ಲಿ ಪ್ಲಾಸ್ಟಿಕ್ ಬಳಸದೇ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ರೂಪಿಸಲು ಮುಂದಾಗಬೇಕು ಎಂದರು.ಸಾಮಾಜಿಕ ಅರಣ್ಯ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ದೇವರಾಜ್ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಮರ ಗಿಡಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕು ಎಂದರಲ್ಲದೆ, ಕನ್ನಡ ನಾಡು-ನುಡಿ ಉಳಿಸಿ ಬೆಳೆಸಬೇಕು. ಇಂಗ್ಲಿಷ್ ವ್ಯಾಮೋಹದಿಂದ ಹೊರಬಂದು ಶುದ್ಧ ಕನ್ನಡವನ್ನೇ ಬಳಸಬೇಕು ಎಂದು ತಿಳಿಸಿದರು. ಬೆಂಗಳೂರಿನ ಕರ್ನಾಟಕ ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರದ ದಿಕ್ಸೂಚಿ ಭಾಷಣಕಾರ ಡಾ: ಕೆ.ಆರ್. ಶ್ರೀಹರ್ಷ ಮಾತನಾಡಿ ಭೂ ಮರುಸ್ಥಾಪನೆ, ಮರು ಭೂಮೀಕರಣ ಹಾಗೂ ಬರ ತಡೆಯುವಿಕೆ ವಿಷಯದ ಬಗ್ಗೆ ತಿಳಿಸಿದರು.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಪರಿಸರ ಅಧಿಕಾರಿ ಬಿ.ಸಿ. ಶಿವಮೂರ್ತಿ ಮಾತನಾಡುತ್ತಾ, ಅತಿಯಾದ ಕೈಗಾರಿಕೆ ಮತ್ತು ಗಣಿಗಾರಿಕೆಯಿಂದ ಪರಿಸರ ಮಲಿನವಾಗುತ್ತಿದೆ. ಜಿಲ್ಲೆಯ ಕೈಗಾರೀಕರಣದಿಂದ ಪರಿಸರದ ಮೇಲೆ ದುಷ್ಪರಿಣಾಮಗಳುಂಟಾಗುತ್ತಿದೆ. ಪರಿಸರವನ್ನು ಸಂರಕ್ಷಿಸಲು ಅರಣ್ಯ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು. ವಿಶ್ವಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಸಿ ನೆಡುವ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ದಾವಣಗೆರೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ವಲಯ ಕಚೇರಿ ಹಿರಿಯ ಪರಿಸರ ಅಧಿಕಾರಿ ರಮೇಶ್ ಡಿ. ನಾಯಕ್ ಅಧ್ಯಕ್ಷತೆವಹಿಸಿದ್ದರು.ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟದ ಪ್ರೇರಕ ಭಾಷಣಕಾರ ಡಾ: ಪೃಥ್ವಿರಾಜ್ ಎಸ್. ಲಕ್ಕಿ, ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಮರುಳಯ್ಯ ಹಾಗೂ ಉಪಾಧ್ಯಕ್ಷ ಸಿ. ಯತಿರಾಜ್, ಟಿ.ಡಿ.ಸಿ.ಸಿ.ಐ. ಅಧ್ಯಕ್ಷ ಟಿ.ಜೆ. ಗಿರೀಶ್, ವಿ.ಐ.ಎ. ಅಧ್ಯಕ್ಷ ಡಾ: ಸಿ.ವಿ. ಹರೀಶ್, ಬೆಳಗಾವಿ ಡಿ.ಸಿ.ಪಿ.(ಸಿ.ಎ.ಆರ್.) ಸಿದ್ದನಗೌಡ ವೈ. ಪಾಟೀಲ್, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಳಿಂಗ ಸರ್ಪ ರಕ್ಷಣೆ
ಸಂವಿಧಾನ ದಿನಾಚರಣೆ: ವಿವಿಧ ಸ್ಪರ್ಧೆ ಆಯೋಜನೆ