ಶಿರಸಿ: ರಾಜ್ಯ ಸರ್ಕಾರ ಶರಾವತಿ ಭೂಗತ ಜಲವಿದ್ಯುತ್ ಯೋಜನೆಯನ್ನು ಕೈಬಿಡಬೇಕು. ಶರಾವತಿ ನದಿಯ ನೀರನ್ನು ಬೆಂಗಳೂರಿಗೆ ಸಾಗಿಸುವ ಯೋಜನೆ ಕೈಗೆತ್ತಿಕೊಳ್ಳಬಾರದು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಆಗ್ರಹಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಬಗ್ಗೆ ಸಾಗರ, ಹೊನ್ನಾವರಗಳಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಸಬೇಕು. ರಾಜ್ಯದ ಅರಣ್ಯ ಸಚಿವರು ಶರಾವತಿ ನದಿ ಕಣಿವೆಗೆ ಭೇಟಿ ನೀಡಬೇಕು. ಕೇಂದ್ರ ಪರಿಸರ ಅರಣ್ಯ ಮಂತ್ರಾಲಯ ಶರಾವತಿ ಅಘನಾಶಿನಿ, ಬೇಡ್ತಿ ಕಣಿವೆ ಪರಿಸ್ಥಿತಿ ಪರಿಶೀಲನೆಗೆ ಉನ್ನತ ಅಧಿಕಾರಿಗಳ ತಂಡ ಕಳಿಸಬೇಕು ಎಂದರು.
ಶರಾವತಿ ನದಿಗೆ ಅಘನಾಶಿನಿ ನದಿ ತಿರುಗಿಸುವ ಯೋಜನೆ ರೂಪಿಸುವ ಹಿಂಬಾಗಿಲ ಪ್ರಯತ್ನ ನಡೆದಿದೆ. ಅಘನಾಶಿನಿ ಕಣಿವೆ ಜನತೆ ಎಚ್ಚರದಿಂದ ಇರಬೇಕು ಎಂದು ಕರೆ ನೀಡಲಾಗಿದೆ.ಹಾವೇರಿ ಜಿಲ್ಲೆಯಲ್ಲಿ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಜಾರಿ ಮಾಡುವ ಬಗ್ಗೆ ಸಚಿವರು ಆಶ್ವಾಸನೆ ನೀಡುತ್ತಿರುವ ಸಂಗತಿ ಬಗ್ಗೆ ಬೇಡ್ತಿ ಕಣಿವೆ ಜನತೆ ಜಾಗೃತಿ ವಹಿಸಬೇಕಿದೆ. ಪ್ರಚಲಿತ ಭೂ ಕುಸಿತ, ಮೇಘಸ್ಫೋಟ, ಮಲೆನಾಡಿನ ಮಹಾಮಳೆಯಿಂದ ಪಶ್ಚಿಮ ಘಟ್ಟ ತತ್ತರಗೊಂಡಿದೆ. ಇನ್ನಷ್ಟು ಬೃಹತ್ ಅಭಿವೃದ್ಧಿ ಯೋಜನೆಗಳನ್ನು ತಡೆದುಕೊಳ್ಳುವ ಧಾರಣಾ ಸಾಮರ್ಥ್ಯ ಇಲ್ಲವಾಗಿದೆ. ಕರಾವಳಿ ನದೀತಿರದ ಮೀನುಗಾರರು ರೈತರು ಉಪ್ಪು ನೀರು ಹೆಚ್ಚಾಗಿ ಆತಂತ್ರರಾಗುವ ಪರಿಸ್ಥಿತಿ ಬರಲಿದೆ.
ಶರಾವತಿ- ಅಘನಾಶಿನಿ ಕೆಳಭಾಗಕ್ಕೆ ಸಿಹಿನೀರು ಬಾರದ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಧಾರಣಾ ಸಾಮರ್ಥ್ಯ ವರದಿ ಶರಾವತಿ ಮತ್ತು ಅಘನಾಶಿನಿ ಕಣಿವೆ ಅಧ್ಯಯನ ವರದಿಗಳ ಶಿಫಾರಸುಗಳನ್ನು ಸರ್ಕಾರ ಅನುಷ್ಠಾನ ಮಾಡಬೇಕು. ೨೦೨೧ರ ಭೂಕುಸಿತ ಅಧ್ಯಯನ ವರದಿ ಶಿಫಾರಸು ಜಾರಿ ಮಾಡಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ವಕ್ಷಲಕ್ಷ ಆಂದೋಲನದ ವಿಶ್ವನಾಥ, ಗಣಪತಿ ಬಿಸಲಕೊಪ್ಪ ಮತ್ತಿತರರು ಇದ್ದರು.