ಕನ್ನಡಪ್ರಭ ವಾರ್ತೆ, ಹನೂರು
ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಅರಣ್ಯಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಣೆಯ ಪ್ರಸ್ತಾವನೆಯನ್ನು ಸರ್ಕಾರ ಕೈಬಿಡಬೇಕು. ವನ್ಯಜೀವಿ ಧಾಮವನ್ನೇ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಬೇಕೆಂದು ಜಿಲ್ಲೆಯ ಸೋಲಿಗ ಅಭಿವೃದ್ಧಿ ಸಂಘದಿಂದ ಪಟ್ಟಣದ ಗ್ರೇಡ್ 2 ತಹಸೀಲ್ದಾರ್ ರಮೇಶ್ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಸೋಲಿಗ ಸಂಘದ ಅಧ್ಯಕ್ಷ ದೊಡ್ಡ ಸಿದ್ದಯ್ಯ ಮಾತನಾಡಿ, ಮಲೆ ಮಹದೇಶ್ವರ ವನ್ಯ ಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ಹೊರಟಿರುವುದು ಸರ್ಕಾರ ಕೈ ಬಿಡಬೇಕು. ವನ್ಯ ಧಾಮವನ್ನೇ ಮುಂದುವರಿಸಿ ಅರಣ್ಯದಲ್ಲಿ ವಾಸಿಸುವ ಸೋಲಿಗ ಸಮುದಾಯದ ಜನತೆಯನ್ನು ಒಕ್ಕಲಿಬ್ಬಿಸಲು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಚಾಮರಾಜನಗರ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಮಾದೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಯಳಂದೂರು ಮತ್ತು ಗುಂಡ್ಲುಪೇಟೆ ತಾಲೂಕುಗಳಲ್ಲಿ 148 ಸೋಲಿಗರ ಪೋಡುಗಳಲ್ಲಿ 7500 ಕುಟುಂಬಗಳು 45000 ಸಂಖ್ಯೆಯಲ್ಲಿ ಸೋಲಿಗರು ಬೆಟ್ಟ ಕುರುಬ, ಜೇನು ಕುರುಬ ಸಮುದಾಯಗಳ ಜನರು 78 ವರ್ಷಗಳಿಂದಲೂ ವಸತಿ, ಶುದ್ಧ ಕುಡಿಯುವ ನೀರು, ವಿದ್ಯುತ್, ರಸ್ತೆ ಸಂಪರ್ಕ, ಆರೋಗ್ಯ, ಶಿಕ್ಷಣ ಹಾಗೂ ಉದ್ಯೋಗ ಜೀವನಾಧಾರಗಳ ನಿರ್ವಹಣೆಯಂತ ಕಠಿಣ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಪೊನ್ನಾಚಿ, ಮಿಣ್ಯಂ ಹಾಗೂ ಪಿ ಜಿ ಪಾಳ್ಯ ಅರಣ್ಯದಂಚಿನ 56 ಪೋಡುಗಳಲ್ಲಿ 2500 ಕುಟುಂಬಗಳು 15,000 ಜನಸಂಖ್ಯೆ ಸೋಲಿಗ ಸಮುದಾಯದ ನಿವಾಸಿಗಳು ಸ್ವಾತಂತ್ರ್ಯ ಬರುವ ಮುನ್ನ ಶತಮಾನಗಳಿಂದಲೂ ವಾಸಿಸುತ್ತಾ ಬಂದಿದ್ದೇವೆ. ಹೀಗಾಗಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆ ಮಾಡುವುದನ್ನು ಕೈ ಬಿಡಬೇಕು.ಎಂದರು.ಗ್ರೇಡ್ 2 ತಹಸೀಲ್ದಾರ್ ರಮೇಶ್ ಮಾತನಾಡಿ, ಸಂಘಟನೆ ವತಿಯಿಂದ ನೀಡಿರುವ ಮನವಿಯನ್ನು ಸರ್ಕಾರಕ್ಕೆ ಕಳಿಸಿ ಕೊಡುವುದಾಗಿ ಭರವಸೆ ನೀಡಿದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಯಳಂದೂರು ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ 56 ಸೋಲಿಗ ಪೊಡುಗಳಿಂದ ಬಂದಿದ್ದ ಪ್ರತಿಭಟನಾಕಾರರು ಇದ್ದರು.ಪ್ರಗತಿಪರ ಪರಿಶೀಲನ ಸಭೆ:
ಮುಂದಿನ 15 ದಿನಗಳಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಗತಿಪರ ಪರಿಶೀಲನ ಸಭೆಯನ್ನು ಸೋಲಿಗ ಅಭಿವೃದ್ಧಿ ಸಂಘದ ವತಿಯಿಂದ ಮಲೆ ಮಹದೇಶ್ವರ ಬೆಟ್ಟದ ಶ್ರೀಗಳ ನೇತೃತ್ವದಲ್ಲಿ ಏರ್ಪಡಿಸಲಾಗಿದೆ ಎಂದು ಸೋಲಿಗ ಅಭಿವೃದ್ಧಿ ಸಂಘದ ಮುಖಂಡ ಮುತ್ತಯ್ಯ ತಿಳಿಸಿದ್ದಾರೆ.ಇದೇ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಚಿಕ್ಕರಂಗಶೆಟ್ಟಿ, ಸಬ್ ಇನ್ಸ್ಪೆಕ್ಟರ್ ರವಿ ಮತ್ತು ಶಿರಸ್ತೇದಾರ್ ಮಾದೇಶ್, ಸೋಲಿಗ ಸಮುದಾಯದ ಅಧ್ಯಕ್ಷರಾದ ದೊಡ್ಡ ಸಿದ್ದಯ್ಯ, ಎಂ. ರಂಗೇಗೌಡ, ಈರಮ್ಮ, ಮುತ್ತಯ್ಯ, ಮಹದೇವ ಇನ್ನಿತರ ಮುಖಂಡರು ಇದ್ದರು.