ವಿಭಿನ್ನ ಆಲೋಚನೆ ಹುಟ್ಟುಹಾಕುವ ಕುತೂಹಲದ ಕಲಿಕೆ

KannadaprabhaNewsNetwork |  
Published : Oct 28, 2025, 12:15 AM IST
ಸ | Kannada Prabha

ಸಾರಾಂಶ

ಕುತೂಹಲದ ಕಲಿಕೆ ನಿಮ್ಮಲ್ಲಿ ವಿಭಿನ್ನ ಆಲೋಚನೆಗಳನ್ನು ಹುಟ್ಟುಹಾಕುತ್ತದೆ.

ಹಗರಿಬೊಮ್ಮನಹಳ್ಳಿ: ಕುತೂಹಲದ ಕಲಿಕೆ ನಿಮ್ಮಲ್ಲಿ ವಿಭಿನ್ನ ಆಲೋಚನೆಗಳನ್ನು ಹುಟ್ಟುಹಾಕುತ್ತದೆ. ಇದರಿಂದ ನಿಮ್ಮ ಕಲಿಕೆ ಶಾಶ್ವತವಾಗುತ್ತದೆ. ಹಾಗಾಗಿ ಕಲಿಕೆಯಲ್ಲಿ ಕುತೂಹಲವಿರಲಿ ಎಂದು ಇಂಡಿಯಾ ಫೌಂಡೇಶನ್ ಫಾರ್ ಆರ್ಟ್ಸ್‌ ಕೃಷ್ಣಮೂರ್ತಿ ಟಿ.ಎನ್. ಹೇಳಿದರು.ತಾಲೂಕಿನ ಬಸರಕೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿ-ಕಲಿಸು ಯೋಜನೆಯ ಕಲಾಂರ್ಗತ ಕಲಿಕೆಯ ಭಾಗವಾದ ಓದು ಹೇಳು ಮತ್ತು ಬರೆ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳಲ್ಲಿ ಕುತೂಹಲ ಮೂಡಲು ಪತ್ತೆದಾರಿ ಕಥೆ, ಕಾದಂಬರಿಗಳ ಓದು ಹೆಚ್ಚು ಪರಿಣಾಮಕಾರಿಯಾದುದು. ಈ ಹಿನ್ನೆಲೆಯಲ್ಲಿ ಮಕ್ಕಳು ಪತ್ತೆದಾರಿ ಕಥೆಗಳ್ನು ಓದುತ್ತಾ, ಅವುಗಳನ್ನು ಪಾಲಕರಿಗೆ ಹೇಳುತ್ತಾ, ತಮ್ಮ ಸುತ್ತಮುತ್ತ ನಡೆಯುವ ಪತ್ತೆದಾರಿ ಘಟನೆಗಳನ್ನು ಆಧರಿಸಿ ತಮ್ಮದೇ ಆದ ಶೈಲಿಯಲ್ಲಿ ಕಥೆಗಳನ್ನು ಬರೆಯುವ ಮೂಲಕ ಉತ್ತಮ ಕಥೆಗಾರರಾಗಬಹುದು. ಆ ಮೂಲಕ ಪಠ್ಯ ಕಲಿಕೆಯಲ್ಲಿ ಹೆಚ್ಚು ಆಸಕ್ತಿಯಿಂದ ಪಾಲ್ಗೊಳ್ಳಲು ಸಹಕಾರವಾಗುತ್ತದೆ. ಈ ಯೋಜನೆಯು ಡಿ.ಎಸ್.ಇ.ಆರ್.ಟಿ ಹಾಗೂ ಐಎಫ್‌ಎ ಸಹಯೋಗದಲ್ಲಿ ನಡೆಯಲಿದ್ದು, ಇಂಟರ್ ಗ್ಲೋಬ್ ಫೌಂಡೇಶನ್ ಪ್ರಾಯೋಜಕತ್ವ ನೀಡಿದೆ. ಇದು ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ ಎಂದರು. ಐಎಫ್‌ಎ ರಾಜ್ಯ ಸಂಪನ್ಮೂಲ ವ್ಯಕ್ತಿ ಬಿ.ಕೊಟ್ರೇಶ್ ಮಾತನಾಡಿ, ಮಕ್ಕಳ ಕಲಿಕೆಯನ್ನು ವಿಭಿನ್ನ ಚಟುವಟಿಕೆಗಳ ಮೂಲಕ ಓರೆಗೆ ಹಚ್ಚುವ ಈ ಯೋಜನೆ ಅತ್ಯಂತ ಮಹತ್ವದ್ದು ಎಂದು ಹೇಳಿದರು. ಮುಖ್ಯಗುರು ಎಂ.ಮಂಜುನಾಥ ಮಾತನಾಡಿ, ಪಠ್ಯದ ಜೊತೆಗಿನ ಪಠ್ಯಪೂರಕ ಚಟುವಟಿಕೆಗಳು ಮಕ್ಕಳಲ್ಲಿ ಕಲಿಕಾಸಕ್ತಿ ಮೂಡಿಸುತ್ತವೆ. ಜೊತೆಗೆ ಜೀವನ ಕೌಶಲ್ಯಗಳನ್ನು ಕಲಿಸುತ್ತವೆ. ಪ್ರೌಢಾವಸ್ಥೆಯಲ್ಲಿ ಇಂತಹ ವೈವಿಧ್ಯಮಯ ಚಟುವಟಿಕೆಗಳು ಮಕ್ಕಳನ್ನು ಸರಿದಾರಿಗೆ ತರುವಲ್ಲಿ ಸಹಕಾರಿಯಾಗಿವೆ ಎಂದು ಹೇಳಿದರು.

ಶಿಕ್ಷಕ ಆರ್.ಬಿ.ಗುರುಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ರೂಪರೇಷೆಗಳನ್ನು ತಿಳಿಸಿದರು. ಶಿಕ್ಷಕರಾದ ಬಾಷಾಸಾಬ್, ಶಾಂತ ಇದ್ದರು. ಶಿಕ್ಷಕರಾದ ಹೇಮಗಿರಿ, ಆನಂದ, ಮಹಾಂತೇಶ್, ಶಾಲಾ ಮಕ್ಕಳು ನಿರ್ವಹಿಸಿದರು.

ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿ-ಕಲಿಸು ಯೋಜನೆಯ ಕಲಾಂರ್ಗತ ಕಲಿಕೆಯ ಭಾಗವಾದ ಓದು ಹೇಳು ಮತ್ತು ಬರೆ ಯೋಜನೆಗೆ ಚಾಲನೆ ನೀಡಲಾಯಿತು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ