ವಿವಾಹಿತೆಯ ಅಪಹರಣ: ದುಷ್ಕರ್ಮಿಗಳಿಗೆ ಥಳಿಸಿದ ಸ್ಥಳೀಯರು

KannadaprabhaNewsNetwork |  
Published : Sep 17, 2026, 03:45 AM IST
ಪಿವಿಆರ್‌ | Kannada Prabha

ಸಾರಾಂಶ

ರಾಜಸ್ತಾನದಲ್ಲಿ ಪ್ರೇಮ ವಿವಾಹ ಆಗಿ ಬೆಂಗಳೂರಿಗೆ ಬಂದು ಪತಿಯೊಂದಿಗೆ ವಾಸವಿದ್ದ ವಿವಾಹಿತೆಯನ್ನು ಅಪಹರಿಸಿ ಕರೆದೊಯ್ಯುತ್ತಿದ್ದ ದುಷ್ಕರ್ಮಿಗಳನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಸ್ಥಳೀಯರು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಬುಧವಾರ ರಾತ್ರಿ ಮಾಗಡಿ ರಸ್ತೆಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಸ್ತಾನದಲ್ಲಿ ಪ್ರೇಮ ವಿವಾಹ ಆಗಿ ಬೆಂಗಳೂರಿಗೆ ಬಂದು ಪತಿಯೊಂದಿಗೆ ವಾಸವಿದ್ದ ವಿವಾಹಿತೆಯನ್ನು ಅಪಹರಿಸಿ ಕರೆದೊಯ್ಯುತ್ತಿದ್ದ ದುಷ್ಕರ್ಮಿಗಳನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಸ್ಥಳೀಯರು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಬುಧವಾರ ರಾತ್ರಿ ಮಾಗಡಿ ರಸ್ತೆಯಲ್ಲಿ ನಡೆದಿದೆ.

ಇದೇ ವೇಳೆ ಆರೋಪಿಗಳ ಅಡ್ಡಾದಿಡ್ಡಿ ಕಾರು ಚಾಲನೆಯಿಂದ 9 ವರ್ಷದ ಮಗು ಸೇರಿದಂತೆ 6 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಸ್ಥಾನ ಮೇಲ್ವಾಸ್ ಗ್ರಾಮದ ನಿವಾಸಿ ಪೂಜಾ (21) ಎಂಬಾಕೆಯನ್ನು ರಕ್ಷಣೆ ಮಾಡಲಾಗಿದೆ. ಕೃತ್ಯ ಎಸಗಿದ ರಾಜಸ್ಥಾನ ಮೂಲದ ರಾಕೇಶ್ (21), ಕರಣ್‌ (25) ಮತ್ತು ಆಯಾನ್‌ (18) ಎಂಬುವರನ್ನು ಬಂಧಿಸಿದ್ದು, ಕಾರು ಚಾಲಕ ಸದ್ದಾಂ ಎಂಬಾತ ತಲೆಮರೆಸಿಕೊಂಡಿದ್ದಾನೆ. ಈತನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಸ್ತಾನದ ಮೇಲ್ವಾಸ್‌ ಗ್ರಾಮದ ನಿವಾಸಿ ಗುಣರಾಮು ಅವರ ಪುತ್ರಿ ಪೂಜಾ ಮತ್ತು ಶೇಷಾರಾಮ್ ಅವರ ಪುತ್ರ ಓಂಪ್ರಕಾಶ್‌ ಎಂಬುವರು ಪರಸ್ಪರ ಪ್ರೀತಿಸುತ್ತಿದ್ದರು. 9 ತಿಂಗಳ ಹಿಂದೆ ಪಾಲಕರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಬಳಿಕ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಗೆ ಬಂದು ವಾಸವಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪೂಜಾ ತಂದೆಯ ಸಹೋದರಿ (ಅತ್ತೆ) ಐವರು ಯುವಕರನ್ನು ಕಳುಹಿಸಿ ಪೂಜಾಳನ್ನು ಅಹರಣ ಮಾಡಲು ಸೂಚಿಸಿದ್ದಾರೆ. ಅದರಂತೆ ಬೆಂಗಳೂರಿಗೆ ಬಂದ ಆರೋಪಿಗಳು, ಬುಧವಾರ ರಾತ್ರಿ 8 ಗಂಟೆಯ ಸುಮಾರಿಗೆ ದಾಸರಹಳ್ಳಿಯಲ್ಲಿದ್ದ ಓಂಪ್ರಕಾಶ್‌ ಮೇಲೆ ಹಲ್ಲೆ ನಡೆಸಿ, ಯುವತಿಯನ್ನು ಅಪಹರಿಸಿ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಯುವತಿ ಜೋರಾಗಿ ಕೂಗಿಕೊಂಡಿದ್ದರಿಂದ ಎಚ್ಚೆತ್ತ ಸ್ಥಳೀಯರು ಕೂಡಲೇ ಕಾರು ಅಡ್ಡಗಟ್ಟಲು ಯತ್ನಿಸಿದ್ದಾರೆ. ಆದರೆ, ಆರೋಪಿಗಳು ಮಾರ್ಗದುದ್ದಕ್ಕೂ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿಕೊಂಡು ಹೋಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ:

ಸಾರ್ವಜನಿಕರು ಹಿಂಬಾಲಿಸಿಕೊಂಡು ಬರುತ್ತಿದ್ದರಿಂದ ಗಾಬರಿಗೊಂಡ ಆರೋಪಿಗಳು, ಗೋವಿಂದರಾಜನಗರ, ವಿಜಯನಗರ ಮಾರ್ಗದಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿಕೊಂಡು ಬಂದು ನ್ಯಾಯಾಧೀಶರ ಕಾರು ಸೇರಿದಂತೆ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಪೃಥ್ವಿರಾಜ್ (12), ಯಶಿಕಾ (9), ಅಮೂಲ್ (35), ಮಣಿ (64), ಜಯಲಕ್ಷ್ಮಿ (57), ಸಂತೋಷ್ (33) ಎಂಬುವರು ಗಂಭೀರ ಗಾಯಗೊಂಡಿದ್ದಾರೆ. ಈ ಪೈಕಿ ಜಯಲಕ್ಷ್ಮೀ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪರಿಸ್ಥಿತಿ ಚಿಂತಾಜನಕವಾಗಿದೆ.

ಸಿನಿಮೀಯ ರೀತಿಯಲ್ಲಿ ಚೇಸಿಂಗ್‌:

ಸುಮಾರು ಆರೇಳು ಕಿಲೋಮೀಟರ್ ದೂರದವರೆಗೆ ಅಪಹರಣಕಾರರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದು, ಕೊನೆಗೆ ವಿಜಯನಗರದ ಹೊಸಹಳ್ಳಿ ಬಳಿ ಸ್ಥಳೀಯರ ನೆರವು ಪಡೆದು ಕಾರು ಅಡ್ಡಗಟ್ಟಿದ್ದಾರೆ. ಆದರೂ ಆರೋಪಿಗಳು ಕಾರು ಚಾಲನೆಗೆ ಮುಂದಾದಾಗ ಕಾರಿನ ಮೇಲೆ ಕಲ್ಲು ಎತ್ತಿಹಾಕಿದ್ದಾರೆ. ಈ ವೇಳೆ ಕಾರು ಚಾಲಕ ಸದ್ದಾಂ ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ, ಪೂಜಾ ಹಾಗೂ ಅಪಹರಣಕಾರರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಈಕೆಯ ಪತಿ ಓಂಪ್ರಕಾಶ್‌ನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೂಜೆ ಹೆಸ್ರಲ್ಲಿ ವೃದ್ಧೆಗೆ40 ಲಕ್ಷದ ರು.ಚಿನ್ನ ವಂಚಿಸಿದ ನಕಲಿ ಜ್ಯೋತಿಷಿ!
ಪಿವಿಆರ್ ಸಿನಿಮಾಸ್‌ಗೆ 75,000 ರು.ದಂಡ