ಕನ್ನಡಪ್ರಭ ವಾರ್ತೆ ಉಳ್ಳಾಲ
ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ಕಿನ್ನಿಗೋಳಿಯಲ್ಲಿನ ಕಲಾವಿದರ ಮನೆ ಉದಯಗಿರಿಯಲ್ಲಿ ಶುಕ್ರವಾರ ನಡೆದ ಕಲಾವಿದರ ಯಕ್ಷಪಯಣದ ಸ್ವಗತ ‘ಯಕ್ಷಾಯಣ- ದಾಖಲೀಕರಣ ಸರಣಿ - 6ರ’ ಕಾರ್ಯಕ್ರಮದಲ್ಲಿ ತಮ್ಮ ಯಕ್ಷ ಪಯಣದ ಅನುಭವ ಕಥನವನ್ನು ಹಂಚಿಕೊಂಡರು.
ಸೀನು ಸೀನರಿಯ ಯಕ್ಷಗಾನದ ಕಾಲದಲ್ಲಿ ಹಾಸ್ಯ ಪಾತ್ರಧಾರಿಯಾಗಿ ಪ್ರವೇಶಿಸಿದ ಬಳಿಕ ಶಿಮಂತೂರು ನಾರಾಯಣ ಶೆಟ್ಟಿ ಮತ್ತು ಮಿಜಾರು ಅಣ್ಣಪ್ಪ ಮಾರ್ಗದರ್ಶನದಿಂದ ಕಲಾವಿದನಾಗಿ ಬೆಳೆಯುವುದಕ್ಕೆ ಸಾಧ್ಯವಾಯಿತು. ತೆಂಕು- ಬಡಗು ಎರಡೂ ತಿಟ್ಟುಗಳಲ್ಲಿಯೂ ಹಾಸ್ಯ ಪಾತ್ರದಲ್ಲಿ ವಿಪುಲ ಅವಕಾಶ ದೊರೆಯಿತು. ಹಾಸ್ಯ ಕಲಾವಿದನಿಗೆ ತೆಂಕುತಿಟ್ಟಿನಲ್ಲಿ ಸ್ವಾತಂತ್ರ್ಯ ಹೆಚ್ಚು. ಬಡಗಲ್ಲಿ ಶಿಸ್ತು ಹೆಚ್ಚು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಿಥುನ್ ಕೊಡೆತ್ತೂರು ಮಾತನಾಡಿ, ಮುಖ್ಯಪ್ರಾಣ ಕಿನ್ನಿಗೋಳಿ ಬಡತನದ ಹಿನ್ನೆಲೆಯಿಂದ ಬಂದವರು. 82 ರ ಹಿರಿ ವಯಸ್ಸಿನಲ್ಲೂ ತಾಳಮದ್ದಳೆ ಯಕ್ಷಗಾನಗಳನ್ನು ನೋಡುವ ಆಸಕ್ತಿ ಹೊಂದಿದ್ದಾರೆ. ಇದು ಹೊಸ ಕಲಾವಿದರಿಗೆ ಮಾರ್ಗದರ್ಶಿ. ಎಷ್ಟು ಗೌರವ ಬಂದರೂ ಅಹಂ ಇಲ್ಲದೆ ಕಲಾವಿದ ಹೇಗಿರಬಹುದೆಂಬುದಕ್ಕೆ ಇವರು ಮಾದರಿ ಎಂದರು.
ಯಕ್ಷಪಯಣದ ಅನುಭವ ಹಂಚಿಕೊಂಡ ಮುಖ್ಯಪ್ರಾಣ ಕಿನ್ನಿಗೋಳಿ ಅವರನ್ನು ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಗೌರವಿಸಲಾಯಿತು.
ಕಿನ್ನಿಗೋಳಿ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಕೆಲೆಂಜೂರು, ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ.ಸತೀಶ್ ಕೊಣಾಜೆ, ಸಿಬ್ಬಂದಿ ಸ್ವಾತಿ ಎಸ್. ರಾವ್, ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಚಂದ್ರಶೇಖರ್ ಎಂ.ಬಿ, ರತ್ನಾಕರವರ್ಣಿ ಪೀಠದ ಸಂಶೋಧಕ ಪ್ರಸಾದ್ ಮತ್ತಿತರರು ಇದ್ದರು.