ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಪ್ರಾದೇಶಿಕ ಸಾರಿಗೆ ಇಲಾಖೆ ಎದುರು ಕರ್ನಾಟಕ ಟ್ಯಾಕ್ಸಿ ಚಾಲಕರ ಅಸೋಸಿಯೇಷನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಾಹನ ಚಾಲಕರು, ಮಾಲೀಕರು, ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸಾರಿಗೆ ಇಲಾಖೆ ಆದೇಶದಂತೆ ರಾಜ್ಯದ ಸಾರಿಗೆ ಇಲಾಖೆ ಆದೇಶ ಜಾರಿಗೆ ಮುಂದಾಗಿರುವುದು ಮಾಲೀಕರನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿದೆ. ಕೂಡಲೇ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸುವ ಆದೇಶದಿಂದ ರಾಜ್ಯದ ಎಲ್ಲಾ ವಾಣಿಜ್ಯ ವಾಹನಗಳು, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕ, ಮಾಲೀಕರು ಹೈರಾಣಾಗಿದ್ದಾರೆ. ಇಂತಹ ಅವೈಜ್ಞಾನಿಕ ಸಾಧನಗಳನ್ನು ಅಳವಡಿಸಲು ಕೇಂದ್ರ ಸರ್ಕಾರ 7,890 ರು. ನಿಗದಿಗೊಳಿಸಿದೆ. ಆದರೆ, ರಾಜ್ಯದ ಎಲ್ಲಾ ಸಾರಿಗೆ ಕಚೇರಿಗಳಲ್ಲಿ 13 ರಿಂದ 15,000 ರು. ವರೆಗೆ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು. ದುಬಾರಿ ತೆರಿಗೆ, ಸ್ಪೀಡ್ ಗವರ್ನರ್, ವಿಮೆ ಹೀಗೆ ಎಲ್ಲವೂ ದುಬಾರಿ ಆಗಿವೆ. ಈ ಸಮಯದಲ್ಲಿ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಸರ್ವೀಸ್ ಬಸ್ಸುಗಳ ಚಾಲಕ, ಮಾಲೀಕರಿಗೆ ಸಂಜೀವಿನಿಯಂತೆ ನೆರವು ನೀಡುವ ಬದಲು ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದು ಕಿಡಿಕಾರಿದರು. ಸ್ವ-ಉದ್ಯೋಗವಾದ ಟ್ಯಾಕ್ಸಿ ಉದ್ಯಮವನ್ನು ಪ್ರೋತ್ಸಾಹಿಸುವ ಬದಲು ಹೊಸ ನಿಯಮಗಳ ಜಾರಿ ಮೂಲಕ ಸಮಸ್ಯೆ ಸೃಷ್ಟಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಆದ್ದರಿಂದ ಆದೇಶ ರದ್ದು ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ನಿಗದಿಪಡಿಸಿರುವ ಹಣಕ್ಕಿಂತ ದುಪ್ಪಟ್ಟು ಹಣವನ್ನು ರಾಜ್ಯ ಸರ್ಕಾರ ನಿಗದಿ ಮಾಡಿದೆ. ಇದರಿಂದ ರಾಜ್ಯದ ಪ್ರವಾಸಿ ವಾಹನ ಚಾಲಕರು ಮತ್ತು ಮಾಲೀಕರಿಗೆ ತೊಂದರೆಯಾಗುತ್ತಿದೆ. ಸರ್ಕಾರಿ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಸ್ವಯಂ ವೃತ್ತಿ ಮಾಡಿಕೊಂಡಿರುವ ಟ್ಯಾಕ್ಸಿ ಉದ್ಯಮದ ಮೇಲೆ ಸರ್ಕಾರ ಪ್ರೋತ್ಸಾಹ ನೀಡಬೇಕೆ ಹೊರತು ತೊಂದರೆ ಕೊಡಬಾರದು ಎಂದು ಚಾಲಕರು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕೆ.ಆರ್.ಪೇಟೆ, ನಾಗಮಂಗಲ ಮತ್ತು ಬೆಳ್ಳೂರು ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರು, ಮಾಲೀಕರು ಭಾಗವಹಿಸಿದ್ದರು.