ಕನ್ನಡಪ್ರಭ ವಾರ್ತೆ ತುಮಕೂರು ಜಿಲ್ಲೆಯ ರೈತರ ಪಹಣಿಗಳಲ್ಲಿ ನಮೂದಾಗಿರುವ ವಕ್ಫ್ ಆಸ್ತಿ ಎಂಬ ಪಹಣಿಗಳನ್ನು ರದ್ದು ಪಡಿಸಬೇಕು. ದೇವಾಲಯದ ಜಮೀನುಗಳನ್ನು ವಕ್ಫ್ ಬೋರ್ಡ್ ನಿಂದ ಮುಕ್ತಗೊಳಿಸಬೇಕು, ಗೋಮಾಳಗಳು, ಸರಕಾರಿ ಆಸ್ತಿಗಳು, ಶಾಲಾ, ಕಾಲೇಜುಗಳಿಗೆ ಸಂಬಂಧಪಟ್ಟ ಆಸ್ತಿಗಳು ವಕ್ಫ್ ಬೋರ್ಡ್ ನಿಂದ ಮುಕ್ತವಾಗಬೇಕು ಎಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ವತಿಯಿಂದ ಬೃಹತ್ ಪ್ರತಿಭಟನಾ ಧರಣಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಸಲಾಯಿತು.ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಬಿ.ಎಚ್.ರಸ್ತೆ,ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಮಠಾಧೀಶರು, ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು, ಬಿಜೆಪಿ, ಅರ್.ಎಸ್.ಎಸ್. ಕಾರ್ಯಕರ್ತರುಗಳು, ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಾಸರಘಟ್ಟ ಮಾತನಾಡಿ, ವಕ್ಫ್ ವಿವಾದ ಇಂದು, ನಿನ್ನೆಯದಲ್ಲ. ಹಲವಾರು ವರ್ಷಗಳಿಂದ ಜನರನ್ನು ಕಾಡುತ್ತಿದೆ. ವಕ್ಪ್ ವಿವಾದದಿಂದ ಕೇವಲ ಹಿಂದುಗಳ ಆಸ್ತಿಗಳಷ್ಠೇ ಹೋಗುತ್ತಿಲ್ಲ. ಹತ್ತಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿರುವ ಬಡ ಮುಸ್ಲಿಂ ಸಮುದಾಯದ ಜನರಿಗೆ ಕಂಟಕ ಪ್ರಾಯವಾಗಿದೆ.ಹಾಗಾಗಿ ಸರಕಾರ ನೊಟೀಸ್ ವಾಪಸ್ ಪಡೆಯುವುದಕ್ಕಿಂತ. ವಕ್ಫ್ ಬೋರ್ಡ್ ಕಾಯ್ದೆಯನ್ನು ರದ್ದುಪಡಿಸಬೇಕು. ಹೇಗೆ ಸಂವಿಧಾನಬದ್ದವಾಗಿ ಜನರು ತಮ್ಮ ಹಕ್ಕುಗಳಿಗಾಗಿ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸುವ ರೀತಿ, ವಕ್ಫ್ ಆಸ್ತಿಗಳಿಗೂ ಮೇಲ್ಮನವಿ ಸಲ್ಲಿಸುವಂತಹ ಅವಕಾಶವನ್ನು ಸರಕಾರ ಮಾಡಬೇಕು.ಜನರಿಗೆ ಇದುವರೆಗೂ ಆಳ್ವಿಕೆ ಮಾಡಿಕೊಂಡು ಬಂದಿರುವ ಎಲ್ಲಾ ಪಕ್ಷಗಳ ಸರಕಾರಗಳು ಜನರಿಗೆ ಮೋಸ ಮಾಡಿವೆ.ಮತಕ್ಕಾಗಿ ಇನ್ನಿಲ್ಲದ ಹೀನ ಕೃತ್ಯಕ್ಕೆ ಕೈ ಹಾಕಿವೆ. ಈಗ ರೈತ ಎಚ್ಚೆತ್ತಿದ್ದಾನೆ. ಅವನು ಸಿಡಿದರೆ ಯಾರಿಗೂ ಉಳಿಗಾಲವಿಲ್ಲ. ಸರಕಾರ ನೋಟೀಸ್ ವಾಪಸ್ ಪಡೆಯುವ ಜೊತೆಗೆ, ಪಹಣಿಯಲ್ಲಿ ನೊಂದಣಿಯಾಗಿರುವ ವಕ್ಫ್ ಆಸ್ತಿ ಎಂಬುದನ್ನು ರದ್ದುಪಡಿಸಬೇಕು. ಜನರ ಗಮನಕ್ಕೆ ತಾರದೇ ಯಾರು ಪಹಣಿಗಳಲ್ಲಿ ವಕ್ಫ್ ಎಂದು ನಮೂದಿಸುತ್ತಿದ್ದಾರೆ ಅಂತಹವರನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಭಾರತೀಯ ಕಿಸಾನ್ ಸಂಘ ಆಗ್ರಹಿಸುತ್ತದೆ ಎಂದರು.ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಸಂಘದ ತುಮಕೂರು ಜಿಲ್ಲಾಧ್ಯಕ್ಷ ವಿಜಯಕುಮಾರ್, ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ನಾರಾಯಣಸ್ವಾಮಿ, ಜಿಲ್ಲ ಪ್ರದಾನ ಕಾರ್ಯದರ್ಶಿ ಗಂಗಾಧರಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ನವೀನ್ ಸದಾಶಿವಯ್ಯ, ತುಮಕೂರು ತಾಲೂಕು ಅಧ್ಯಕ್ಷ ನಾರಾಯಣಗೌಡ, ಗುಬ್ಬಿ ತಾಲೂಕು ಅಧ್ಯಕ್ಷ ಮಂಜುನಾಥ್,ತುರುವೇಕೆರೆ ಅಧ್ಯಕ್ಷ ಸಿದ್ದಲಿಂಗಪ್ಪ, ಗುಬ್ಬಿ ಮಹಿಳಾ ಪ್ರಮುಖ ಪ್ರೇಮ, ಡಾ.ಪರಮೇಶ್, ಹೆಚ್.ಎನ್.ಚಂದ್ರಶೇಖರ್,ಅನಿಲ್‌ಕುಮಾರ್ ಭೈರಣ್ಣ, ಬ್ಯಾಟರಂಗೇಗೌಡ, ಅಣ್ಣೇನಹಲ್ಳಿ ಶಿವಕುಮಾರ್, ದಲೀಪ್, ಶಿವಪ್ರಸಾದ್,ಸೇರಿದಂತೆ ಹಲವರು ಭಾಗವಹಿಸಿದ್ದರು.
ಮೆರವಣಿಗೆಯಲ್ಲಿ ಗೋಡೆಕೆರೆಯ ಶ್ರೀಮೃತ್ಯಂಜಯ ದೇಶಿಕೇಂದ್ರ ಸ್ವಾಮೀಜಿ,ತಮ್ಮಡಿಹಳ್ಳಿಯ ಅಭಿನವ ಮಲ್ಲಿಕಾರ್ಜುನಸ್ವಾಮೀಜಿ, ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿ, ಬೆಳ್ಳಾವಿಯ ಶ್ರೀಕಾರದ ವೀರಬಸವಸ್ವಾಮೀಜಿ,ಬಸವ ಮಹಾಲಿಂಗಸ್ವಾಮೀಜಿ,ಗೊಲ್ಲಹಳ್ಳಿ ಶ್ರೀಗಳು, ಕೋಡಿಹಳ್ಳಿ ಶ್ರೀಗಳು ಪಾಲ್ಗೊಂಡಿದ್ದರು.