ಕನ್ನಡಪ್ರಭ ವಾರ್ತೆ ವಿಜಯಪುರ
ರೈತರ ಭೂಮಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿರುವುದು ನಿಜಕ್ಕೂ ಆತಂಕಕಾರಿ. ಇವೆಲ್ಲವೂ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ನಡೆಯುತ್ತಿರುವ ಕುತಂತ್ರ. ಆದ್ದರಿಂದ ದೇಶದಲ್ಲಿರುವ ವಕ್ಫ್ ಕಾಯ್ದೆಯನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಕ್ಫ್ ಬೋರ್ಡ್ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ- ಹಸಿರು ಸೇನೆ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಅಹೋರಾತ್ರಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು. ಶತಮಾನಗಳಿಂದ ತಮ್ಮ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬಂದ ರೈತರಿಗೆ, ಮಠ ಮಂದಿರಗಳ ಭೂಮಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿದೆ. ಭಾರತೀಯ ಜನತಾ ಪಕ್ಷ ಇದಕ್ಕೆ ಖಂಡಿತವಾಗಿಯೂ ಅವಕಾಶ ನೀಡುವುದಿಲ್ಲ. ನಮ್ಮ ನೆಲದ ರಕ್ಷಣೆಯನ್ನು ನಾವು ಮಾಡುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿಯೂ ಮತ್ತು ಪಕ್ಷದಿಂದ ಹೋರಾಟ ನಡೆಸಿ ರೈತರಿಗೆ ಮತ್ತು ಈ ವಕ್ಫ್ ಮಂಡಳಿಯ ಅಕ್ರಮದಿಂದ ಬೇಸತ್ತ ಎಲ್ಲರಿಗೂ ನ್ಯಾಯ ಒದಗಿಸುವುದಾಗಿ ರೈತರಿಗೆ ಭರವಸೆ ನೀಡಿದರು.
ವಕ್ಫ್ ವಿಶ್ವದಲ್ಲಿ ಮೂರ್ನಾಲ್ಕು ರಾಷ್ಟ್ರಗಳಲ್ಲಿವೆ. ಹಲವಾರು ಮುಸ್ಲಿಂ ರಾಷ್ಟ್ರದಲ್ಲಿ ಇದು ಇಲ್ಲ. ಆದರೆ ದೇಶದಲ್ಲಿ ಇದನ್ನು ತಂದ ಪುಣ್ಯಾತ್ಮರು ಕಾಂಗ್ರೆಸ್ ನಾಯಕರು. ೨೦೧೩ರಲ್ಲಿ ವಕ್ಫ್ ಕಾನೂನಿಗೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತಷ್ಟು ಬಲಿಷ್ಠಗೊಳಿಸಿದ್ದಾರೆ. ಈಗ ವಿಜಯಪುರದ ಡಿಸಿ, ಎಸ್ಪಿ ಮನೆ, ಜಿಲ್ಲಾಸ್ಪತ್ರೆ, ವಿರಕ್ತಮಠ ವಕ್ಫ್ ಆಗಿವೆ. ಪಡಗಾನೂರು ಇಡೀ ಊರು, ಚೋಳರ ಕಾಲದ ದೇಗುಲ, ಚಾಲುಕ್ಯರ ಕಾಲದ ಸೋಮೇಶ್ವರ ದೇಗುಲ ಊರೇ ವಕ್ಫ್ ಆಗಿದೆ ಎಂದು ದೂರಿದರು. ಇಲ್ಲಿರೋ ಮುಸ್ಲಿಮರು ಮತಾಂತರ ಆಗಿದ್ದಾರೆ. ನಿನ್ನೆ ಒಬ್ಬರು ಹೇಳುತ್ತಿದ್ದರು, ಇದು ಅಲ್ಲಾಹನ ಆಸ್ತಿ ಎಂದಿದ್ದಾರೆ, ಅಲ್ಲಾ ಯಾವಾಗ ರಿಯಲ್ ಎಸ್ಟೇಟ್ ಬಿಜಿನೆಸ್ ಮಾಡುತ್ತಿದ್ದ ಎಂದು ಲೇವಡಿ ಮಾಡಿದರು. ೧೬ ಸಾವಿರ ಎಕರೆ ಭೂಮಿಯನ್ನು ವಿಜಯಪುರದಲ್ಲಿ ವಕ್ಫ್ ಆಗಿ ಪರಿವರ್ತಿಸಿದ್ದಾರೆ. ನಾನು ತುಷ್ಟಿಕರಣ ಸಹಿಸೋದಿಲ್ಲ. ವಕ್ಫ್ ಕಾನೂನಿನ ಅನ್ ಲಿಮಿಟೆಡ್ ಪವರ್ ತೆಗೆದುಹಾಕಬೇಕು ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಜಮೀರ್ ಅಹ್ಮದ್ ಪ್ರತಿ ಜಿಲ್ಲೆಗೆ ಹೋಗಿ ವಕ್ಫ್ ಅದಾಲತ್ ಮಾಡಿದ್ದಾನೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾನೆ. ಗೆಜೆಟ್ ನೋಟಿಫಿಕೇಶನ್ ಅನ್ನು ಈಗ ಹೊರಗೆ ತಂದು ಎಂಟ್ರಿಗೆ ಒತ್ತಾಯ ಮಾಡುತ್ತಿದ್ದಾರೆ. ನನಗೆ ಕಂದಾಯ ಇಲಾಖೆ ಅಧಿಕಾರಿ ಭೇಟಿಯಾಗಿ ಹೇಳಿದ್ದಾರೆ. ಬರೀ ಕಾಲಂ ನಂಬರ್ 11ರಲ್ಲಿ ವಕ್ಫ್ ಹೆಸರು ಸೇರಿಸಿದ್ದೇವೆ. ಈಗ ಅವುಗಳನ್ನು ಹಿಂದೆ ತೆಗೆದುಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳಿಗೆ ಹೇಳೋರು ಕೇಳೋರು ಇಲ್ಲ ಎಂದು ದೂರಿದರು.
ವಕ್ಫ್ ಅದಾಲತ್ ಬಗ್ಗೆ ಸಿಎಂ ಸ್ಪಷ್ಟನೆ ನೀಡಬೇಕು. ಸ್ಪಷ್ಟನೆ ನೀಡದೆ ಹೋದಲ್ಲಿ ಅವರು ಇದರಲ್ಲಿ ಭಾಗಿ ಎನ್ನಬೇಕಾಗುತ್ತೆ. ಪಹಣಿಯಲ್ಲಿನ ವಕ್ಫ್ ಹೆಸರು ತೆಗೆದು ಹಾಕಬೇಕು. ಇದು ಸುಪ್ರೀಂ ಹೋದರೆ ಅಧಿಕಾರಿಗಳು ಸಿಕ್ಕಿ ಹಾಕಿಕೊಳ್ಳುತ್ತಾರೆ. ಜಮೀರ್ ಒಬ್ಬ ಅಯೋಗ್ಯ. ಅವನ ಮಾತು ಕೇಳಿದರೆ ನೀವು ಕೋರ್ಟ್ ಕಟಕಟೆಯಲ್ಲಿ ನಿಲ್ಲಬೇಕಾಗುತ್ತೆ ಎಂದು ಕಿಡಿಕಾರಿದರು.ಈ ಸಂದರ್ಭದಲ್ಲಿ ಸಂಸದರಾದ ಗೋವಿಂದ ಕಾರಜೋಳ, ರಮೇಶ ಜಿಗಜಿಣಗಿ, ಶಾಸಕ ಯತ್ನಾಳ್, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡರಾದ ವಿಜುಗೌಡ ಪಾಟೀಲ, ಗುರಲಿಂಗಪ್ಪ ಅಂಗಡಿ, ಉಮೇಶ ಕೋಳಕೂರ, ಉಮೇಶ ಕಾರಜೋಳ ಸೇರಿದಂತೆ ಮುಂತಾದವರು ಇದ್ದರು.-------
ಬಾಕ್ಸ್ಇನ್ಮುಂದೆ ವಕ್ಫ್ ಅದಾಲತ್ ಆಗಬಾರದು
ಕಾಂಗ್ರೆಸ್ ನಾಯಕರು ಜಿಗಿದು ಜಿಗಿದು ಮಾತನಾಡುತ್ತಿದ್ದಾರೆ. 2 ಸಾವಿರಕ್ಕೆ ಓಟು ಹಾಕಿದ ಪರಿಣಾಮ ಇದು. ಬಿಜೆಪಿ ಕಾಲದಲ್ಲಿ ನೋಟಿಸ್ ಕೊಟ್ಟಿರಬಹುದು. ನಾನು ನೋಟಿಸ್ ಕೊಟ್ಟಿಲ್ಲ ಎಂದಿಲ್ಲ. ಬಿಜೆಪಿ ಅವಧಿಯಲ್ಲಿ ವಕ್ಫ್ ಹೆಸರು ಸೇರಿದ್ದರೂ ತೆಗೆದುಹಾಕಿ, ವಕ್ಫ್ ಕಾನೂನನ್ನು ಕೇಂದ್ರ ಸರ್ಕಾರ ತೆಗೆದುಹಾಕಿಯೇ ಹಾಕಬೇಕು. ವಕ್ಫ್ ಅದಾಲತ್ ಬಂದ್ ಆಗಬೇಕು. ಇನ್ಮುಂದೆ ವಕ್ಫ್ ಅದಾಲತ್ ಆಗಬಾರದು. ಜಮೀರ್ ಇದು ಪಾಕಿಸ್ತಾನ ಅಲ್ಲ, ನಾನು ಹಿಂದೂಸ್ತಾನಿ. ಜಮೀರ ವಿಜಯಪುರದಲ್ಲಿ ನಡೆಸಿದ ವಕ್ಫ್ ಅದಾಲತ್ ಸಭೆಯಲ್ಲಿ ಸಿಎಂ ಸೂಚನೆಯಂತೆ ಆಗಿದೆ. ಹೀಗಾಗಿ ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ಕೊಡಲೇ ಬೇಕು. ನಿಮಗೆ ಬರೀ ಮುಸ್ಲಿಂ ಓಟ್ ಹಾಕಿದ್ದಾರಾ? ಇದೊಂದು ಲ್ಯಾಂಡ್ ಜಿಹಾದ್ ಎಂದು ಸಿಎಂ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದರು.-----------
ಕೋಟ್.....ನಮ್ಮ ನೆಲವನ್ನು ನಾವೆಂದೂ ಬಿಟ್ಟುಕೊಡುವುದಿಲ್ಲ. ನಮ್ಮ ರೈತರು, ಹಿಂದುಗಳ ಪರವಾಗಿ ನಾವು ಇರುತ್ತೇವೆ. ರಾಜಕೀಯ ಲಾಭಕ್ಕಾಗಿ ದೇಶವನ್ನೇ ನಾಶ ಮಾಡಲು ಕಾಂಗ್ರೆಸ್, ವಕ್ಫ್ ಮಂಡಳಿಯನ್ನು ಬಳಸಿಕೊಂಡು ರೈತರ, ಮಠ ಮಂದಿರಗಳ ಭೂಮಿಯನ್ನು ಕಬಳಿಸುವ ಪ್ರಯತ್ನಕ್ಕೆ ಇಳಿದಿದೆ. ಯಾವುದೇ ಕಾರಣಕ್ಕೂ ಇದಕ್ಕೆ ನಾವು ಅವಕಾಶ ನೀಡುವುದಿಲ್ಲ.
- ಪ್ರಹ್ಲಾದ ಜೋಶಿ, ಕೇಂದ್ರ ಸಚಿವ