ನನ್ನನ್ನು ಸಂಪುಟದಿಂದ ಕಿತ್ತೊಗೆಯಲು ಸಾಧ್ಯವಿಲ್ಲ: ಜಮೀರ್

KannadaprabhaNewsNetwork |  
Published : Oct 31, 2024, 01:03 AM IST
ಜಮೀರ್ ಅಹ್ಮದ ಖಾನ್. | Kannada Prabha

ಸಾರಾಂಶ

ಪ್ರಹ್ಲಾದ ಜೋಶಿ ಅವರು ರಾಜಕೀಯದಲ್ಲಿ ಜಾತಿ ಮಾಡಬಾರದು. ಮಾಡುವುದಿದ್ದರೆ ಅವರ ಮನೆಯಲ್ಲಿ ಮಾಡಿಕೊಳ್ಳಲಿ. ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ ನಮ್ಮನ್ನು ವಿರೋಧಿಸುತ್ತಿದ್ದಾರೆ. ಮತ ಹಾಕಿದರೆ ಮಾತ್ರ ನಾವು ಒಳ್ಳೆಯವರು.

ಹುಬ್ಬಳ್ಳಿ:

ನಾನು ಭಾರತೀಯ. 24 ಕ್ಯಾರೆಟ್ ಚಿನ್ನ. ಎಂದಿಗೂ ಕೋಮು-ದ್ವೇಷ ಹರಡುವ ಕೆಲಸ ಮಾಡಿಲ್ಲ. ಪ್ರಹ್ಲಾದ ಜೋಶಿ ಅವರಿಗೆ ಹಿಂದೂ- ಮುಸ್ಲಿಂ ಬಗ್ಗೆ ಮಾತನಾಡುವುದು ಬಿಟ್ಟು ಬೇರೆ ಗೊತ್ತಿಲ್ಲ. ನನ್ನನ್ನು ಸಂಪುಟದಿಂದ ಕಿತ್ತು ಹಾಕಲು ಸಾಧ್ಯವಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದರು.

ಅವರು ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಮೀರ್ ಅಹ್ಮದ್ ಅವರು ಕೋಮು ದ್ವೇಷ ಹರಡುತ್ತಿದ್ದು, ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ತಿರುಗೇಟು ನೀಡಿದರು.

ಎಲ್ಲರೂ ಭಾರತೀಯರೆ:

ಭಾರತದಲ್ಲಿ ಇರುವವರೆಲ್ಲರೂ ಭಾರತೀಯರು. ಪ್ರಹ್ಲಾದ ಜೋಶಿ ಅವರು ರಾಜಕೀಯದಲ್ಲಿ ಜಾತಿ ಮಾಡಬಾರದು. ಮಾಡುವುದಿದ್ದರೆ ಅವರ ಮನೆಯಲ್ಲಿ ಮಾಡಿಕೊಳ್ಳಲಿ. ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ ನಮ್ಮನ್ನು ವಿರೋಧಿಸುತ್ತಿದ್ದಾರೆ. ಮತ ಹಾಕಿದರೆ ಮಾತ್ರ ನಾವು ಒಳ್ಳೆಯವರು. ಇಲ್ಲದಿದ್ದರೆ ಈ ರೀತಿ ಮಾತನಾಡುತ್ತಾರೆ ಎಂದರು.

ಉಪಚುನಾವಣೆಯಿಂದಾಗಿ ಮುನ್ನೆಲೆಗೆ:

ರೈತರು ಅನ್ನದಾತರು. ಅವರ ಆಸ್ತಿಯನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಎಲ್ಲದಕ್ಕೂ ಕಾನೂನು ಇದ್ದು ಯಾರ ಆಸ್ತಿಯನ್ನು ಯಾರೂ ಕಿತ್ತುಕೊಳ್ಳಲು ಬರುವುದಿಲ್ಲ. ರಾಜ್ಯದಲ್ಲಿ ಉಪ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ವಿಷಯವನ್ನು ಬಿಜೆಪಿಯವರು ಮುನ್ನೆಲೆಗೆ ತಂದಿದ್ದಾರೆ, ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು‌ ಟೀಕಿಸಿದರು.

ಒತ್ತುವರಿಯಾಗಿರುವ ವಕ್ಫ್ ಆಸ್ತಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ವಕ್ಫ್ ಅದಾಲತ್ ಮಾಡುತ್ತಿದ್ದೇವೆ. ವಕ್ಫ್ ಬೋರ್ಡ್ ಸರ್ಕಾರದಿಂದ ಒಂದು ಇಂಚು ಜಾಗವನ್ನೂ ಪಡೆದಿಲ್ಲ. ವಕ್ಫ್ ಬೋರ್ಡ್‌ನಲ್ಲಿ ಸದ್ಯ 23 ಸಾವಿರ ಎಕರೆ ಜಾಗ ಇದ್ದು, 84 ಸಾವಿರ ಎಕರೆ ಒತ್ತುವರಿ ಆಗಿದೆ. ಮುಜರಾಯಿ ಇಲಾಖೆಯ 38 ಸಾವಿರ ಎಕರೆ ಜಾಗದಲ್ಲಿ 700 ಎಕರೆ ಒತ್ತುವರಿಯಾಗಿದೆ. ಅದರ ತೆರವಿಗೆ ನಾನೂ ಕೈಜೋಡಿಸುತ್ತೇನೆ ಎಂದರು.

ಎಲ್ಲ ದಾಖಲೆ ನೀಡಲು ಸೂಚನೆ:

ವಿಜಯಪುರದಲ್ಲಿ ರೈತರನ್ನು ಬಿಜೆಪಿಯವರು ಎತ್ತಿಕಟ್ಟುತ್ತಿದ್ದಾರೆ. ನಾನು ವಕ್ಫ್‌ ಸಚಿವನಾಗಿ ಹೇಳುತ್ತಿದ್ದೇನೆ, ಯಾವ ರೈತರಿಗೂ ತೊಂದರೆ ಆಗುವುದಿಲ್ಲ. ವಕ್ಫ್ ಆಸ್ತಿ ವಿವಾದ ಸಂಬಂಧ ಬಿಜೆಪಿ ರಚಿಸಿರುವ ತಂಡಕ್ಕೆ ಎಲ್ಲ ದಾಖಲೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ ಎಂದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ