ಕನ್ನಡಪ್ರಭ ವಾರ್ತೆ ಜಮಖಂಡಿ
ಭವ ಬಂಧನಗಳನ್ನು ಕಳೆಯುವವರು ಗುರು ಎನಿಸುತ್ತಾರೆ. ಆ ನಿಟ್ಟಿನಲ್ಲಿ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮೀಜಿ ಮನುಕುಲಕ್ಕೆ ಗುರುವಾಗಿದ್ದರು. ಸಿದ್ದೇಶ್ವರ ಶ್ರೀಗಳೆಂದರೆ ಜಗತ್ತಿಗೆ ಪ್ರಾಣ ಎಂದು ತಿಕೋಟಾದ ವಿರಕ್ತ ಮಠದ ಚೆನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ ಹೇಳಿದರು.ತಾಲೂಕಿನ ಹುಲ್ಯಾಳ ಗುರುದೇವಾಶ್ರಮದಲ್ಲಿ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳ ನಾಲ್ಕನೇ ಭಾನುವಾರ ಆಯೋಜಿಸುವ ಶ್ರೀಗುರುದೇವ ಸತ್ಸಂಗದ ಅಂಗವಾಗಿ ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹಾಗೂ ಅಪರೂಪದ ಸಂತ ಸಿದ್ದೇಶ್ವರ ಮಹಾಸ್ವಾಮೀಜಿ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಗುರುದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮೈಗೂರಿನ ಶಿವಾನಂದ ಮಠದ ಗುರುಪ್ರಸಾದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಪದ್ಮಶ್ರೀ ಪ್ರಶಸ್ತಿಯನ್ನು ವಿನಯದಿಂದ ಬೇಡ ಎಂದಿದ್ದರು. ಕೋಟಿಗಟ್ಟಲೆ ಅನುದಾನ ಸಹ ಬೇಡ ಎಂದಿದ್ದರು. ಶ್ರೀಗಳಿಗೆ ಆಧಾರ ಕಾರ್ಡ್ ಸಹ ಇರಲಿಲ್ಲ. ಅಂತಹ ತ್ಯಾಗಮಯಿ ಆಗಿದ್ದರು ಎಂದರು. ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹಾಗೂ ನಡೆದಾಡುವ ದೇವರು ಎಂದೆ ಗುರುತಿಸಿಕೊಂಡಿದ್ದ ಸಿದ್ದೇಶ್ವರ ಮಹಾಸ್ವಾಮೀಜಿ ಗುರು-ಶಿಷ್ಯ ಸಂಬಂಧ ಶ್ರೇಷ್ಠವಾಗಿತ್ತು. ಮಲ್ಲಿಕಾರ್ಜುನ ಶ್ರೀಗಳು ವೇದಿಕೆಯಲ್ಲಿದ್ದಾಗ ಸಿದ್ದೇಶ್ವರ ಶ್ರೀಗಳು ವೇದಿಕೆ ಮೇಲೆ ಕೂರುತ್ತಿರಲಿಲ್ಲ ಎಂದು ಆಶೀರ್ವಚನ ನೀಡಿದರು.
ಸಿದ್ದಾಪುರದ ಮಾತೋಶ್ರೀ ಮಹಾದೇವಿ ಅಕ್ಕನವರು ಸಾನ್ನಿಧ್ಯ ವಹಿಸಿದ್ದರು. ದೀಪೋತ್ಸವ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹರ್ಷಾನಂದ ಶ್ರೀಗಳು ಹಾಗೂ ಗುರುಪ್ರಸಾದ ಶ್ರೀಗಳು ಜಂಟಿಯಾಗಿ ಜಪಯೋಗ ಮಾಡಿಸಿದರು. ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳಿಂದ ದಿಕ್ಷೆ ಪಡೆದಿರುವ ಹುನ್ನೂರಿನ ಚಂದ್ರಶೇಖರ ಸಾವಳಗಿ ದಂಪತಿ ಹಾಗೂ ಸರ್ಕಾರಿ ಪಿ.ಬಿ.ಪ.ಪೂ ಕಾಲೇಜಿನ ಉಪನ್ಯಾಸಕಿ ವಿಮಲಾ ಬೊಮ್ಮನಹಳ್ಳಿರನ್ನು ಶ್ರೀಮಠದ ಪರವಾಗಿ ಸನ್ಮಾನಿಸಲಾಯಿತು.ಸಿದ್ದೇಶ್ವರ ಶ್ರೀಗಳು ಮೊದಲ ಬಾರಿಗೆ ಮಲ್ಲಿಕಾರ್ಜುನ ಶ್ರೀಗಳನ್ನು ಭೇಟಿಯಾದ ಪ್ರಸಂಗ ಕುರಿತು ಸಾಹಿತಿ ಗಣಪತಿ ಗಲಗಲಿ ಅವರು ರಚಿಸಿ ನಿರ್ದೇಶಿಸಿದ ಗುರುದರ್ಶನ ಕಿರುನಾಟಕವನ್ನು ಶಾಲಾ ಮಕ್ಕಳು ಪ್ರದರ್ಶಿಸಿದರು. ಸಾಹಿತಿ ಗುರುನಾಥ ಸುತಾರ ಹಾಗೂ ಬಾಲಕಿ ಶೀಲಾ ಡಂಗಿ ಸಿದ್ದೇಶ್ವರ ಶ್ರೀಗಳ ಕುರಿತು ಹಾಡು ಹೇಳಿದರು. ಶಾಲಾ ಮಕ್ಕಳಾದ ಸುಪ್ರೀತ ಗೆದ್ದೆಪ್ಪನವರ, ವಿಕಾಸ ಹಂಚಿನಾಳ, ಪ್ರೀತಮ ಸುನಗದ, ಸಿದ್ದಪ್ಪ ಜಮಖಂಡಿ, ಪೃಥ್ವಿರಾಜ ಹೊನಗೌಡ, ಆಕಾಶ ಬಡಿಗೇರ, ಮಂಜುನಾಥ ಬಡಿಗೇರ ನಾಟಕ ಪ್ರದರ್ಶನ ನೀಡಿದರು.
ಶ್ರೀಗುರುದೇವ ಸತ್ಸಂಗ ಬಳಗದ ಕಲಾವಿದರಾದ ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ, ರಾಮಚಂದ್ರ ಹೂಗಾರ, ಸಿದ್ದು ಉಪ್ಪಲದಿನ್ನಿ, ಪುಂಡಲೀಕ ಭಜಂತ್ರಿ ಸಂಗೀತ ಸೇವೆ ನೀಡಿದರು. ಪ್ರಾಚಾರ್ಯ ಡಾ.ಟಿ.ಪಿ.ಗಿರಡ್ಡಿ ಸ್ವಾಗತಿಸಿ, ಸಂಗಮೇಶ ಗಾಣಿಗೇರ ನಿರೂಪಿಸಿದರು.