ಶಿರಹಟ್ಟಿ: ವಾಲ್ಮೀಕಿ ಜನ್ಮದಿನವನ್ನು ಆಚರಿಸುವ ಕುರಿತು ಸೆ. ೧೮ರಂದು ಕರೆಯಲಾಗಿದ್ದ ಪೂರ್ವಭಾವಿ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಿ ಸೆ. ೨೨ರಂದು ಆಯೋಜಿಸಲಾಗಿತ್ತು. ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳಿಗೆ ಎರಡು ಬಾರಿ ನೋಟಿಸ್ ನೀಡಿದ್ದರೂ ಗೈರಾಗಿದ್ದರಿಂದ ಸಮಾಜದ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.ತಾಲೂಕಿನಲ್ಲಿ ೨೮ ಇಲಾಖೆಗಳಿವೆ. ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಪೂರ್ವಭಾವಿ ಸಭೆಗೆ ಹಾಜರಾಗಿದ್ದರಿಂದ ಸಭೆಯಲ್ಲಿ ತೀವ್ರ ಅಸಮಾಧಾನ ಹೊರಹಾಕಿದರಲ್ಲದೇ ವಾಲ್ಮೀಕಿ ಸಮುದಾಯದವರನ್ನು ಸರ್ಕಾರಿ ಇಲಾಖೆ ಅಧಿಕಾರಿಗಳು ಅಗೌರವದಿಂದ ನೋಡುತ್ತಿದ್ದು, ಪೂರ್ವಭಾವಿ ಸಭೆಗೆ ಬಾರದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ದೂರಿದರು.ಸಮಾಜದ ಮುಖಂಡ ಸಣ್ಣವೀರಪ್ಪ ಹಳ್ಳೆಪ್ಪನವರ ಮಾತನಾಡಿ, ಪ್ರತಿವರ್ಷವೂ ಮಹಾತ್ಮರ ಹಾಗೂ ಹೋರಾಟಗಾರರ ಜಯಂತಿಯ ಪೂರ್ವಭಾವಿ ಸಭೆ ಕರೆದಾಗ ಕೆಲವು ಅಧಿಕಾರಿಗಳು ಬಾರದೇ ನಿರ್ಲಕ್ಷ್ಯ ಮಾಡುತ್ತಾರೆ. ವರ್ಷಕ್ಕೊಮ್ಮೆ ಬರುವ ಜಯಂತಿಗಳು ಎಲ್ಲ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿಕೊಂಡು ವಿಜೃಂಭಣೆಯಿಂದ ಆಚರಣೆ ಮಾಡಿ ಅವರಿಗೆ ಗೌರವ ಸೂಚಿಸುವುದು ಎಲ್ಲರ ಕರ್ತವ್ಯವಾಗಿದೆ.ಜವಾಬ್ದಾರಿಯುತ ಸರ್ಕಾರಿ ಅಧಿಕಾರಿಗಳೇ ನಿರ್ಲಕ್ಷ್ಯ ಮಾಡಿದರೆ ಮಹನಿಯರಿಗೆ ಅವಮಾನ ಮಾಡಿದಂತಾಗುತ್ತದೆ. ಎಲ್ಲ ಅಧಿಕಾರಿಗಳು ಬಂದ ಮೇಲೆ ಸಭೆ ಹಮ್ಮಿಕೊಳ್ಳಬೇಕು ಎಂದು ಸಭೆಯನ್ನು ಮಧ್ಯದಲ್ಲಿಯೇ ಬಹಿಷ್ಕರಿಸಿದರು.ಮುಖಂಡ ಜಾನು ಲಮಾಣಿ, ಮಂಜುನಾಥ ಶಂಕಿನದಾಸರ ಮಾತನಾಡಿ, ವರ್ಷಕ್ಕೊಮ್ಮೆ ಆಚರಿಸುವ ಜಯಂತಿಯನ್ನು ಕಾಟಾಚಾರಕ್ಕೆ ನಡೆಸುವುದು ಬೇಡ. ಸಭೆಯಲ್ಲಿ ಅಧಿಕಾರಿಗಳೇ ಇಲ್ಲವೆಂದರೆ ಸಭೆ ನಡೆಸುವುದು ಸೂಕ್ತವಲ್ಲ ಎಂದರು.ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿಸುವ ಕುರಿತು ನಾಲ್ಕಾರು ದಿನ ಮುಂಚಿತವಾಗಿಯೇ ಎಲ್ಲ ಇಲಾಖೆ ಅಧಿಕಾರಿಗಳಿಗೆ ಲಿಖಿತ ನೋಟಿಸ್ ನೀಡಲಾಗಿದೆ. ಸರ್ಕಾರದ ಸುತ್ತೋಲೆ ಪ್ರಕಾರ ಕಡ್ಡಾಯವಾಗಿ ಸಭೆಗೆ ಹಾಜರಾಗಿ ತಮ್ಮ ತಮ್ಮ ಇಲಾಖೆಗಳಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಾಡುವ ಮಾಹಿತಿ ಇದ್ದರೂ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದು, ಈ ಬಾರಿ ಅವರ ವಿರುದ್ಧ ಕ್ರಮ ಆಗಲೇ ಬೇಕು ಎಂದು ಪಟ್ಟು ಹಿಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಕೆ. ರಾಘವೇಂದ್ರರಾವ್ ಮಾತನಾಡಿ, ಇಲಾಖೆಯ ಪ್ರತಿನಿಧಿಗಳನ್ನು ಕಳುಹಿಸದೇ ಖುದ್ದಾಗಿ ಅಧಿಕಾರಿಗಳೇ ಪೂರ್ವಭಾವಿ ಸಭೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಎಷ್ಟು ಇಲಾಖೆ ಅಧಿಕಾರಿಗಳು ಗೈರಾಗಿದ್ದಾರೆ ಎಂಬ ಮಾಹಿತಿ ಪಡೆದು ಶಿಸ್ತುಕ್ರಮಕ್ಕೆ ತುರ್ತು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲ ಲಮಾಣಿ, ಬಿಇಒ ಎಚ್. ನಾಣಕೀ ನಾಯಕ, ಮಲ್ಲಿಕಾರ್ಜುನ ಪಾಟೀಲ, ಫಕ್ಕೀರೇಶ ತಿಮ್ಮಾಪೂರ, ಪಪಂ ಮುಖ್ಯಾಧಿಕಾರಿ ಸವಿತಾ ತಾಂಭ್ರೆ, ವಲಯ ಅರಣ್ಯ ಇಲಾಖೆಯ ಪ್ರಭಾರಿ ಎಸಿಎಫ್ ಮೇಘನಾ ಎಚ್., ಗೋವಿಂದಪ್ಪ ಬಾಗೇವಾಡಿ, ಆರ್.ಡಿ. ಕೆಂಚಕ್ಕನವರ, ಬಸಣ್ಣ ನಾಯಕರ, ಯಲ್ಲಪ್ಪ ಬಂಗಾರಿ, ಮಲ್ಲೇಶ ತಳವಾರ, ಶಿವಪ್ಪ ತಳವಾರ, ಸಿಡಿಪಿಒ ಮೃತ್ತುಂಜಯ ಗುಡ್ಡದಾನವೇರಿ, ಎಂ.ಎಸ್. ಸಂಕನೂರ, ಈರಣ್ಣ ಚವ್ಹಾಣ ಇತರರು ಇದ್ದರು.