ಮಹಿಳಾ ಸಚಿವರಿಲ್ಲದಿರುವುದು ಖಂಡನೀಯ: ನಾಗಲಕ್ಷ್ಮೀ ಚೌಧರಿ

KannadaprabhaNewsNetwork |  
Published : Oct 26, 2026, 03:30 AM IST
ಎಐಸಿಸಿ ವೀಕ್ಷಕ ಕಮಲೇಶ್ವರ ಪಟೇಲ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು  | Kannada Prabha

ಸಾರಾಂಶ

ಮಹಿಳೆಯರು ಪುರುಷರೊಂದಿಗೆ ಸಮಾನತೆಗಾಗಿ ಹೋರಾಡಬೇಕಾದ ಪರಿಸ್ಥಿತಿ ಇರಬಾರದು.

ಕುಷ್ಟಗಿ: ಅನುಭವ ಮಂಟಪದಲ್ಲಿ 33 ಮಹಿಳೆಯರು ವಚನಗಳನ್ನು ರಚಿಸಿದ ಐತಿಹಾಸಿಕ ಪರಂಪರೆಯುಳ್ಳ ಬಸವಣ್ಣನ ನಾಡಿನಲ್ಲಿ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವಲ್ಲಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ರಾಜ್ಯದಲ್ಲಿ ಮಹಿಳಾ ಸಚಿವರಿಗೆ ಪ್ರಾತಿನಿಧ್ಯ ಇಲ್ಲದಿರುವ ಬಗ್ಗೆ ಅಸಮಾಧಾನವಿದೆ. ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ಮೂಲಕ ಆಡಳಿತದಲ್ಲಿ ಅವರ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ಪುರುಷರೊಂದಿಗೆ ಸಮಾನತೆಗಾಗಿ ಹೋರಾಡಬೇಕಾದ ಪರಿಸ್ಥಿತಿ ಇರಬಾರದು. ಅವಕಾಶ ನೀಡಿದರೆ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬಲ್ಲರು. ಮಹಿಳೆಯರಿಗೆ ಸಮಾನ ಸ್ಥಾನಮಾನ ಕಲ್ಪಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದರು.

ಬಸವಣ್ಣನ ನಾಡಿನಲ್ಲಿ ಮಹಿಳೆಯರಿಗೆ ರಾಜಕೀಯವಾಗಿ ಸೂಕ್ತ ಸ್ಥಾನಮಾನ ದೊರೆಯಬೇಕು. ಆಡಳಿತದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸಬೇಕು. ಮಹಿಳಾ ಪ್ರಾತಿನಿಧ್ಯದ ಕೊರತೆಯ ಬಗ್ಗೆ ತೀವ್ರ ಅಸಮಾಧಾನವಿದೆ ಎಂದರು.

ಕಾನೂನು ಅರಿವು: ಹಿಂದೆ ಮಹಿಳೆಯರಿಗೆ ಅನೇಕ ಕಾನೂನುಗಳ ಬಗ್ಗೆ ಅರಿವು ಇರಲಿಲ್ಲ. ಅನ್ಯಾಯವಾದಾಗ ಎಲ್ಲಿ ದೂರು ನೀಡಬೇಕು, ಪೊಲೀಸರನ್ನು ಹೇಗೆ ಸಂಪರ್ಕಿಸಬೇಕು ಹಾಗೂ ಸಹಾಯವಾಣಿಯ ನೆರವು ಹೇಗೆ ಪಡೆಯಬೇಕು ಎಂಬ ಮಾಹಿತಿ ಕಡಿಮೆ ಇತ್ತು. ಈಗ ಮಹಿಳೆಯರಲ್ಲಿ ಜಾಗೃತಿ ಹೆಚ್ಚುತ್ತಿದ್ದು, ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಈ ಬದಲಾವಣೆ ಸಂತಸ ತಂದಿದೆ ಎಂದರು.

ಶೇ. 50ರಷ್ಟು ಮೀಸಲಾತಿ: ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿರುವ ಕುರಿತು ಮಾತನಾಡಿದ ಅವರು, ರಾಜೀವ್ ಗಾಂಧಿ ಅವರ ಕಾಲದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಪ್ರಯತ್ನ ನಡೆಯಿತು. ನಂತರ ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶತ ಶತಮಾನದಿಂದಲೂ ಅಭಿವೃದ್ಧಿ ಕಾಣದ ಸ್ಮಾರಕ
ಅಯೋಡಿನ್ ಯುಕ್ತ ಉಪ್ಪು ಕುಟುಂಬದ ಆರೋಗ್ಯ ಸಂರಕ್ಷಕ: ಡಾ. ಪ್ರೀತ್