ಗದಗ: ಭಾರತೀಯ ಸನ್ಯಾಸ ಪರಂಪರೆಯಲ್ಲಿ ಮೊಟ್ಟಮೊದಲ ಬಾರಿಗೆ ಕಂಡುಬರುವ ಮಹರ್ಷಿ ಯಾಜ್ಞವಲ್ಕ್ಯರಿಂದ ಹಿಡಿದು ಬುದ್ಧ ಹಾಗೂ ಶಂಕರಾಚಾರ್ಯರವರೆಗೆ ಸನ್ಯಾಸ ಪರಂಪರೆಯು ಅದ್ಭುತವಾಗಿ ಬೆಳೆದುಬಂದಿದೆ. ಸನ್ಯಾಸತ್ವಕ್ಕೆ ಪ್ರಮುಖವಾಗಿ ಬೇಕಾದುದು ಪರಮ ವೈರಾಗ್ಯ ಎಂದು ಗದಗ, ವಿಜಯಪುರದ ರಾಮಕೃಷ್ಣ ವಿವೇಕಾನಂದಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದರು.
ಭಾರತೀಯ ಪರಂಪರೆಯಲ್ಲಿ ಮನುಷ್ಯನು ಮೊದಲು ತಪಸ್ವಿಯಾಗಬೇಕು. ರಾಮಕೃಷ್ಣ ಪರಮಹಂಸರು ತಾವು 12 ವರ್ಷಗಳ ಕಾಲ ಮಾಡಿದ ತಪಸ್ಸನ್ನು ಸ್ವಂತಕ್ಕೆ ಬಳಸದೆ ಸ್ವಾಮಿ ವಿವೇಕಾನಂದರಿಗೆ ಧಾರೆಯೆರೆದರು. ಆ ಮೂಲಕ ವಿವೇಕಾನಂದರು ವಿಶ್ವಕ್ಕೆ ಚೈತನ್ಯದ ಚಿಲುಮೆಯಾದರು ಎಂದರು.
ಬಳಗಾನೂರು ಚಿಕೇನಕೊಪ್ಪದ ಚನ್ನವೀರ ಶರಣರ ಮಠದ ಶಿವಶಾಂತವೀರ ಶರಣರು ಮಾತನಾಡಿ, ಗುರುವು ಮನುಷ್ಯನನ್ನು ಸಜ್ಜನನನ್ನಾಗಿ ಮಾಡುವುದಲ್ಲದೆ, ಜನನ, ಮರಣದ ಭೀತಿಯಿಂದ ಮುಕ್ತಗೊಳಿಸಿ ಪರಮ ಸುಖ ನೀಡುವ ಶಕ್ತಿಯಾಗಿದ್ದಾನೆ ಎಂದರು.ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನ ಮಠದ ಫಕೀರ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಗುರು ಜ್ಞಾನ ಭಾಸ್ಕರನಾಗಿದ್ದು, ಅಜ್ಞಾನ ಕಳೆದು ಸುಜ್ಞಾನ ಬಿತ್ತುತ್ತಾನೆ. ಫಕೀರ ಸ್ವಾಮಿಗಳ ಪರಂಪರೆಯು ಮಠ- ಮಸೀದಿಗಳ ಮೂಲಕ ಸಮಾಜದಲ್ಲಿ ಭಾವೈಕ್ಯತೆ ಬಿತ್ತಿದೆ ಎಂದರು.
ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಜಯೇಂದ್ರಪುರಿ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಹೊಸಳ್ಳಿ ಬೂದೀಶ್ವರ ಮಠದ ಅಭಿನವ ಬೂದೀಶ್ವರ ಸ್ವಾಮೀಜಿ, ಅಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮತಾಯಿ, ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಮಾತನಾಡಿದರು.