ಸಿದ್ದಾಪುರ: ಜನವಿರೋಧಿ ಮತ್ತು ಪರಿಸರ ಮಾರಕವಾದ ಅಘನಾಶಿನಿ ನದಿ ತಿರುವು ಯೋಜನೆಗೆ ಆಕ್ಷೇಪಿಸಿ ಪ್ರಥಮ ಹಂತದಲ್ಲಿ ೨೫ ಸಾವಿರಕ್ಕೂ ಮಿಕ್ಕ ಕುಟುಂಬಗಳಿಂದ ಆಕ್ಷೇಪಪತ್ರ ಸಲ್ಲಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ತೀರ್ಮಾನಿಸಿದೆ ಎಂದು ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಸಭೆಯಲ್ಲಿ ನಿರ್ಣಯ: ೧.೨೦ ಲಕ್ಷ ಗಿಡ ನಾಶ ಮಾಡಿ ೬೦೦ ಎಕರೆ ಪ್ರದೇಶ ಮುಳುಗಡೆಯಾಗುವುದೆಂದು ಕೇಂದ್ರ ಸರ್ಕಾರದ ಡಿಪಿಆರ್‌ನಲ್ಲಿ ಪ್ರಸ್ತಾಪವಾಗಿರುವುದು ಅವೈಜ್ಞಾನಿಕವೆಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಅಲ್ಲದೇ ೧೯೪ ಕಿಮೀ ಸುರಂಗ ಮಾರ್ಗದಿಂದ ೩೫ ಟಿಎಂಸಿ ಅಘನಾಶಿನಿ ನದಿ ನೀರನ್ನು ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗೆ ೨೩ ಸಾವಿರ ಕೋಟಿ ವೆಚ್ಚದಿಂದ ಪ್ರಸ್ತಾಪಿಸಲಾದ ಯೋಜನೆ ವಾಸ್ತವಿಕತೆಯಿಂದ ಕೂಡಿದ್ದಲ್ಲ ಎಂದು ಸಭೆಯಲ್ಲಿ ಅಭಿಪ್ರಾಯಗಳು ಪ್ರಸ್ತಾಪವಾದವು.
ಜಿಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಸ್ವಾಗತಿಸಿದರು. ಎನ್.ಎಸ್. ನಾಯ್ಕ ನರಮುಂಡಗಿ ವಂದಿಸಿದರು. ಹಿರಿಯ ಹೋರಾಟಗಾರರಾದ ಎನ್.ವಿ. ಹೆಗಡೆ ಮುತ್ತಿಗೆ, ಕೆ.ಟಿ. ನಾಯ್ಕ ಹೆಗ್ಗೇರಿ, ಕ್ಯಾದಗಿ ಗ್ರಾಪಂ ಅಧ್ಯಕ್ಷ ರಾಮಕೃಷ್ಣ ನಾಯ್ಕ ಶಿರೂರು, ಜಿಪಂ ಮಾಜಿ ಸದಸ್ಯ ಎಸ್.ಆರ್. ಹೆಗಡೆ ಕುಂಬಾರಕುಳಿ, ಲೋಹಿತ್ ಆರ್. ನಾಯ್ಕ ಬಿಳ್ಳುಮನೆ, ಮಂಜುನಾಥ ಹೆಗಡೆ ಗುಂಜಗೋಡ, ಗೋವಿಂದಗೌಡ ಕಿಲವಳ್ಳಿ ಅಭಿಪ್ರಾಯವನ್ನು ಮಂಡಿಸಿದರು. ಬಿ.ಕೆ. ನಾಯ್ಕ ಕುರಗೆತೋಟ, ದಿನೇಶ್ ನಾಯ್ಕ ಬೆಡ್ಕಣಿ, ದಿವಾಕರ್ ಕ್ಯಾದಗಿ, ನಾಗರಾಜ ಮರಾಠಿ, ಹೇಮಂತ ಹುಕ್ಕಳೆಗದ್ದೆ, ದಿನೇಶ್ ನಾಯ್ಕ ಹಾರ್ಸಿಕಟ್ಟಾ, ರಾಮಚಂದ್ರ ನಾಯ್ಕ ತ್ಯಾಗಲಮನೆ, ಚಂದ್ರಕಾಂತ ನಾಯ್ಕ ಗುಳ್ಳುಮನೆ, ಉಮೇಶ್ ನಾಯ್ಕ ಶೇಲೂರು, ಹಾಜೀರಾ ಬೇಗಂ ಕಾನಗೋಡ, ಶಿವಾನಂದ ನಾಯ್ಕ, ಅಬ್ದುಲ್ ಸುಭಾನ, ಸುಭಾಷ್ ನಾಯ್ಕ ಹೊಸಗದ್ದೆ ಭಾಗವಹಿಸಿದರು.ಪಾದಯಾತ್ರೆ, ಜಾಗೃತಿ ಸಭೆ: ಸಮಗ್ರವಾಗಿ ಅಘನಾಶಿನಿ ನದಿ ತಿರುವು ಯೋಜನೆ ಸ್ಥಗಿತಗೊಳಿಸಲು ವ್ಯಾಪಕ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿಲಾಗಿದ್ದು, ಯೋಜನೆ ವಿರೋಧಿಸಿ ಫೆ. ೨ರಂದು ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಗೋಳಿಮಕ್ಕಿಯಲ್ಲಿ ಸಭೆ, ಆನಂತರ ಬಾಳೆಕೊಪ್ಪ ಗ್ರಾಮದ ಅಘನಾಶಿನಿ ನದಿಯ ವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಫೆ. ೨ರಿಂದ ೧೦ರ ವರೆಗೆ ೧೨೩ ಗ್ರಾಮಗಳಲ್ಲಿ ಜಾಗೃತಿ ಸಭೆ, ಫೆ. ೧೧ರ ಮುಂಜಾನೆ ೮ರಿಂದ ಬಿಳಗಿಯಿಂದ ಪಾದಯಾತ್ರೆ ಆರಂಭಿಸಿ, ೧೦.೩೦ಕ್ಕೆ ಪಟ್ಟಣದ ನೆಹರು ಮೈದಾನದಲ್ಲಿ ಬಹಿರಂಗ ಸಭೆ ನಡೆಸಲಾಗುವುದು ಎಂದು ರವೀಂದ್ರ ನಾಯ್ಕ ಹೇಳಿದರು.