ಗುರುವು ಮನುಷ್ಯನನ್ನು ಸಜ್ಜನನನ್ನಾಗಿ ಮಾಡುವುದಲ್ಲದೆ, ಜನನ, ಮರಣದ ಭೀತಿಯಿಂದ ಮುಕ್ತಗೊಳಿಸಿ ಪರಮ ಸುಖ ನೀಡುವ ಶಕ್ತಿಯಾಗಿದ್ದಾನೆ.
ಗದಗ: ಭಾರತೀಯ ಸನ್ಯಾಸ ಪರಂಪರೆಯಲ್ಲಿ ಮೊಟ್ಟಮೊದಲ ಬಾರಿಗೆ ಕಂಡುಬರುವ ಮಹರ್ಷಿ ಯಾಜ್ಞವಲ್ಕ್ಯರಿಂದ ಹಿಡಿದು ಬುದ್ಧ ಹಾಗೂ ಶಂಕರಾಚಾರ್ಯರವರೆಗೆ ಸನ್ಯಾಸ ಪರಂಪರೆಯು ಅದ್ಭುತವಾಗಿ ಬೆಳೆದುಬಂದಿದೆ. ಸನ್ಯಾಸತ್ವಕ್ಕೆ ಪ್ರಮುಖವಾಗಿ ಬೇಕಾದುದು ಪರಮ ವೈರಾಗ್ಯ ಎಂದು ಗದಗ, ವಿಜಯಪುರದ ರಾಮಕೃಷ್ಣ ವಿವೇಕಾನಂದಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದರು.
ಬುಧವಾರ ತಾಲೂಕಿನ ಹುಲಕೊಟಿ ಗ್ರಾಮದ ಕೈಲಾಸ ಆಶ್ರಮದ 34ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಸಮ್ಮುಖ ವಹಿಸಿ ಮಾತನಾಡಿದರು.ಭಾರತೀಯ ಪರಂಪರೆಯಲ್ಲಿ ಮನುಷ್ಯನು ಮೊದಲು ತಪಸ್ವಿಯಾಗಬೇಕು. ರಾಮಕೃಷ್ಣ ಪರಮಹಂಸರು ತಾವು 12 ವರ್ಷಗಳ ಕಾಲ ಮಾಡಿದ ತಪಸ್ಸನ್ನು ಸ್ವಂತಕ್ಕೆ ಬಳಸದೆ ಸ್ವಾಮಿ ವಿವೇಕಾನಂದರಿಗೆ ಧಾರೆಯೆರೆದರು. ಆ ಮೂಲಕ ವಿವೇಕಾನಂದರು ವಿಶ್ವಕ್ಕೆ ಚೈತನ್ಯದ ಚಿಲುಮೆಯಾದರು ಎಂದರು.
ಬಳಗಾನೂರು ಚಿಕೇನಕೊಪ್ಪದ ಚನ್ನವೀರ ಶರಣರ ಮಠದ ಶಿವಶಾಂತವೀರ ಶರಣರು ಮಾತನಾಡಿ, ಗುರುವು ಮನುಷ್ಯನನ್ನು ಸಜ್ಜನನನ್ನಾಗಿ ಮಾಡುವುದಲ್ಲದೆ, ಜನನ, ಮರಣದ ಭೀತಿಯಿಂದ ಮುಕ್ತಗೊಳಿಸಿ ಪರಮ ಸುಖ ನೀಡುವ ಶಕ್ತಿಯಾಗಿದ್ದಾನೆ ಎಂದರು.ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನ ಮಠದ ಫಕೀರ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಗುರು ಜ್ಞಾನ ಭಾಸ್ಕರನಾಗಿದ್ದು, ಅಜ್ಞಾನ ಕಳೆದು ಸುಜ್ಞಾನ ಬಿತ್ತುತ್ತಾನೆ. ಫಕೀರ ಸ್ವಾಮಿಗಳ ಪರಂಪರೆಯು ಮಠ- ಮಸೀದಿಗಳ ಮೂಲಕ ಸಮಾಜದಲ್ಲಿ ಭಾವೈಕ್ಯತೆ ಬಿತ್ತಿದೆ ಎಂದರು.
ಅಣ್ಣಿಗೇರಿಯ ರುದ್ರಮುನೀಶ್ವರ ದಾಸೋಹ ಮಠದ ಡಾ. ಶಿವಕುಮಾರ ಸ್ವಾಮೀಜಿ ಮಾತನಾಡಿ, ಜಗತ್ತಿನ ಅಜ್ಞಾನ ಹಾಗೂ ಅನಂತ ದುಃಖ ನಿವಾರಣೆಗೆ ಸಿದ್ಧಾರೂಢರ ಪರಂಪರೆ ಅವತರಿಸಿದೆ. 14 ಭಾಷೆಗಳನ್ನು ಕರಗತ ಮಾಡಿಕೊಂಡಿದ್ದ ಸಿದ್ಧಾರೂಢರು ಬೆಳೆಸಿದ 27 ಶಿಷ್ಯ ಪರಂಪರೆಗಳಲ್ಲಿ ರುದ್ರಮುನೀಶ್ವರ ಮಠವೂ ಒಂದು ಎಂದು ಸ್ಮರಿಸಿದರು.ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಜಯೇಂದ್ರಪುರಿ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಹೊಸಳ್ಳಿ ಬೂದೀಶ್ವರ ಮಠದ ಅಭಿನವ ಬೂದೀಶ್ವರ ಸ್ವಾಮೀಜಿ, ಅಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮತಾಯಿ, ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಮುಖಂಡರಾದ ಎಸ್.ಕೆ. ಪಾಟೀಲ, ರವಿ ಎಂ. ಮೂಲಿಮನಿ, ಕೆ.ಆರ್. ಪ್ರಭು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಕೆ. ಜಮಾದಾರ ನಿರೂಪಿಸಿದರು. ಸಂಜೆ ರಾಜರಾಜೇಶ್ವರಿ ಹಾಗೂ ಶ್ರೀಗಳವರ ಹೂವಿನ ಪಲ್ಲಕ್ಕಿ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ಜರುಗಿದವು.