ಜನವಿರೋಧಿ ಮತ್ತು ಪರಿಸರ ಮಾರಕವಾದ ಅಘನಾಶಿನಿ ನದಿ ತಿರುವು ಯೋಜನೆಗೆ ಆಕ್ಷೇಪಿಸಿ ಪ್ರಥಮ ಹಂತದಲ್ಲಿ ೨೫ ಸಾವಿರಕ್ಕೂ ಮಿಕ್ಕ ಕುಟುಂಬಗಳಿಂದ ಆಕ್ಷೇಪಪತ್ರ ಸಲ್ಲಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ತೀರ್ಮಾನಿಸಿದೆ.

ಸಿದ್ದಾಪುರ: ಜನವಿರೋಧಿ ಮತ್ತು ಪರಿಸರ ಮಾರಕವಾದ ಅಘನಾಶಿನಿ ನದಿ ತಿರುವು ಯೋಜನೆಗೆ ಆಕ್ಷೇಪಿಸಿ ಪ್ರಥಮ ಹಂತದಲ್ಲಿ ೨೫ ಸಾವಿರಕ್ಕೂ ಮಿಕ್ಕ ಕುಟುಂಬಗಳಿಂದ ಆಕ್ಷೇಪಪತ್ರ ಸಲ್ಲಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ತೀರ್ಮಾನಿಸಿದೆ ಎಂದು ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅಘನಾಶಿನಿ ನದಿ ಜೋಡಣೆ ಯೋಜನೆ ವಿರುದ್ಧ ಜನಜಾಗೃತಿ ಮೂಡಿಸುವ ಅಂಗವಾಗಿ ಅಣಲೇಬೈಲ್ ಗ್ರಾಪಂ ಗೋಳಿಮಕ್ಕಿಯಲ್ಲಿ ಫೆ. ೨ರಂದು ಜರುಗಲಿರುವ ಸಾರ್ವಜನಿಕ ಸಭೆ ಮತ್ತು ಪಾದಯಾತ್ರೆ ಅಂಗವಾಗಿ ಸ್ಥಳೀಯ ಬಾಲಭವನದ ಸಭಾಂಗಣದಲ್ಲಿ ಜರುಗಿದ ಹೋರಾಟದ ರೂಪುರೇಷೆ ಸಭೆಯಲ್ಲಿ ಸಭೆಯ ನಿರ್ಣಯವನ್ನು ಅವರು ಪ್ರಕಟಿಸಿದರು.ಧಾರಾಳವಾಗಿ ಜಿಲ್ಲೆಯ ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗೆ ನೀಡಿರುವುದರಿಂದ ೧೯೭೩ರಲ್ಲಿ ಇದ್ದ ಅರಣ್ಯ ಪ್ರಮಾಣ ಶೇ. ೭೨.೨೬ರಿಂದ ೨೦೧೩ರಲ್ಲಿ ಜಿಲ್ಲೆಯ ಅರಣ್ಯ ಪ್ರಮಾಣ ಶೇ. ೫೯.೭೦ರಷ್ಟು ಕಡಿಮೆಯಾಗಿರುವುದು ವಿಷಾದದ ಸಂಗತಿ. ಮುಂಡಗೋಡ ತಾಲೂಕಿನಲ್ಲಿ ೧೬೦೦ ಹೆಕ್ಟೇರ್ ಭೂಮಿಯನ್ನು ಟಿಬೇಟಿಯನ್ ಕಾಲನಿಗೆ ನೀಡುವ ಸರ್ಕಾರ, ಜಿಲ್ಲೆಯ ೮೦ ಸಾವಿರ ಅರಣ್ಯವಾಸಿ ಕುಟುಂಬಗಳಿಗೆ ಕೇವಲ ೫೩ ಸಾವಿರ ಎಕರೆ ಭೂಮಿ ನೀಡಲು ಹಿಂದೇಟು ಹಾಕುವುದು ಖೇದಕರ ಎಂದು ಹೇಳಿದರು.ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಯೋಜನೆಯ ಪೂರ್ವ ಕಾರ್ಯಸಾಧ್ಯತಾ ಕರಡು ವರದಿ ಸಿದ್ಧಪಡಿಸಿದ್ದು, ಪರಿಶೀಲನೆ ಪೂರ್ಣಗೊಂಡ ಆನಂತರ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದರಿಂದ ಆಕ್ಷೇಪಣೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಅರಣ್ಯ ಪ್ರಮಾಣ ಕಡಿಮೆ ಆಗಿದ್ದಾಗ್ಯೂ ಬೇಡ್ತಿ ಯೋಜನೆ, ಶರಾವತಿ ನದಿ ಪಂಪ್ಡ್‌ ಸ್ಟೋರೇಜ್, ಅಘನಾಶಿನಿ ನದಿ ಜೋಡಣೆ ಯೋಜನೆ ಜಾರಿಗೆ ಸರ್ಕಾರಗಳು ಕಾರ್ಯ ಪ್ರವೃತ್ತರಾಗುತ್ತಿರುವುದು ವಿಷಾದಕರ ಎಂದು ಹೇಳಿದರು.

ಸಭೆಯಲ್ಲಿ ನಿರ್ಣಯ: ೧.೨೦ ಲಕ್ಷ ಗಿಡ ನಾಶ ಮಾಡಿ ೬೦೦ ಎಕರೆ ಪ್ರದೇಶ ಮುಳುಗಡೆಯಾಗುವುದೆಂದು ಕೇಂದ್ರ ಸರ್ಕಾರದ ಡಿಪಿಆರ್‌ನಲ್ಲಿ ಪ್ರಸ್ತಾಪವಾಗಿರುವುದು ಅವೈಜ್ಞಾನಿಕವೆಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಅಲ್ಲದೇ ೧೯೪ ಕಿಮೀ ಸುರಂಗ ಮಾರ್ಗದಿಂದ ೩೫ ಟಿಎಂಸಿ ಅಘನಾಶಿನಿ ನದಿ ನೀರನ್ನು ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗೆ ೨೩ ಸಾವಿರ ಕೋಟಿ ವೆಚ್ಚದಿಂದ ಪ್ರಸ್ತಾಪಿಸಲಾದ ಯೋಜನೆ ವಾಸ್ತವಿಕತೆಯಿಂದ ಕೂಡಿದ್ದಲ್ಲ ಎಂದು ಸಭೆಯಲ್ಲಿ ಅಭಿಪ್ರಾಯಗಳು ಪ್ರಸ್ತಾಪವಾದವು.

ಜಿಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಸ್ವಾಗತಿಸಿದರು. ಎನ್.ಎಸ್. ನಾಯ್ಕ ನರಮುಂಡಗಿ ವಂದಿಸಿದರು. ಹಿರಿಯ ಹೋರಾಟಗಾರರಾದ ಎನ್.ವಿ. ಹೆಗಡೆ ಮುತ್ತಿಗೆ, ಕೆ.ಟಿ. ನಾಯ್ಕ ಹೆಗ್ಗೇರಿ, ಕ್ಯಾದಗಿ ಗ್ರಾಪಂ ಅಧ್ಯಕ್ಷ ರಾಮಕೃಷ್ಣ ನಾಯ್ಕ ಶಿರೂರು, ಜಿಪಂ ಮಾಜಿ ಸದಸ್ಯ ಎಸ್.ಆರ್. ಹೆಗಡೆ ಕುಂಬಾರಕುಳಿ, ಲೋಹಿತ್ ಆರ್. ನಾಯ್ಕ ಬಿಳ್ಳುಮನೆ, ಮಂಜುನಾಥ ಹೆಗಡೆ ಗುಂಜಗೋಡ, ಗೋವಿಂದಗೌಡ ಕಿಲವಳ್ಳಿ ಅಭಿಪ್ರಾಯವನ್ನು ಮಂಡಿಸಿದರು. ಬಿ.ಕೆ. ನಾಯ್ಕ ಕುರಗೆತೋಟ, ದಿನೇಶ್ ನಾಯ್ಕ ಬೆಡ್ಕಣಿ, ದಿವಾಕರ್ ಕ್ಯಾದಗಿ, ನಾಗರಾಜ ಮರಾಠಿ, ಹೇಮಂತ ಹುಕ್ಕಳೆಗದ್ದೆ, ದಿನೇಶ್ ನಾಯ್ಕ ಹಾರ್ಸಿಕಟ್ಟಾ, ರಾಮಚಂದ್ರ ನಾಯ್ಕ ತ್ಯಾಗಲಮನೆ, ಚಂದ್ರಕಾಂತ ನಾಯ್ಕ ಗುಳ್ಳುಮನೆ, ಉಮೇಶ್ ನಾಯ್ಕ ಶೇಲೂರು, ಹಾಜೀರಾ ಬೇಗಂ ಕಾನಗೋಡ, ಶಿವಾನಂದ ನಾಯ್ಕ, ಅಬ್ದುಲ್ ಸುಭಾನ, ಸುಭಾಷ್ ನಾಯ್ಕ ಹೊಸಗದ್ದೆ ಭಾಗವಹಿಸಿದರು.

ಪಾದಯಾತ್ರೆ, ಜಾಗೃತಿ ಸಭೆ: ಸಮಗ್ರವಾಗಿ ಅಘನಾಶಿನಿ ನದಿ ತಿರುವು ಯೋಜನೆ ಸ್ಥಗಿತಗೊಳಿಸಲು ವ್ಯಾಪಕ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿಲಾಗಿದ್ದು, ಯೋಜನೆ ವಿರೋಧಿಸಿ ಫೆ. ೨ರಂದು ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಗೋಳಿಮಕ್ಕಿಯಲ್ಲಿ ಸಭೆ, ಆನಂತರ ಬಾಳೆಕೊಪ್ಪ ಗ್ರಾಮದ ಅಘನಾಶಿನಿ ನದಿಯ ವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಫೆ. ೨ರಿಂದ ೧೦ರ ವರೆಗೆ ೧೨೩ ಗ್ರಾಮಗಳಲ್ಲಿ ಜಾಗೃತಿ ಸಭೆ, ಫೆ. ೧೧ರ ಮುಂಜಾನೆ ೮ರಿಂದ ಬಿಳಗಿಯಿಂದ ಪಾದಯಾತ್ರೆ ಆರಂಭಿಸಿ, ೧೦.೩೦ಕ್ಕೆ ಪಟ್ಟಣದ ನೆಹರು ಮೈದಾನದಲ್ಲಿ ಬಹಿರಂಗ ಸಭೆ ನಡೆಸಲಾಗುವುದು ಎಂದು ರವೀಂದ್ರ ನಾಯ್ಕ ಹೇಳಿದರು.