ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಕಂಪನಿ ಕಾರ್ಯದರ್ಶಿ ಉದ್ಯೋಗದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಅವಕಾಶವಿದೆ ಎಂದು ಬೆಂಗಳೂರಿನ ಕಂಪನಿ ಕಾರ್ಯದರ್ಶಿ ತಿರುಪಾಲ್ ಗೋರಿಗ್ ಹೇಳಿದರು.ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ, ಉದ್ಯೋಗ, ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗದ ಆಶ್ರಯದಲ್ಲಿ ನಡೆದ ಎಕ್ಸ್ ಫ್ಲೋರಿಂಗ್ ದಿ ರೋಡ್ ಟು ಕಂಪನಿ ಸೆಕ್ರೆಟರಿ ಶಿಫ್ ಪ್ರಿಪರೇಷನ್ ಪ್ರೋಪೆಸನ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಪ್ರಪಂಚದಲ್ಲಿ ಏನು ಬೇಕಾದರು ಸಾಧಿಸಬಹುದು ಮತ್ತು ಎಲ್ಲವನ್ನು ಸಾಧಿಸಲು ಸಾಧ್ಯವಿದೆ ಎಂದರು. ಯಾವುದೇ ವಿಷಯದಲ್ಲಿ ಸಾಧನೆ ಮಾಡಬೇಕಾದರೆ ಕಲಿಯಬೇಕೆಂಬ ಹಸಿವು ಇರಬೇಕು. ಕಲಿಯ ಬೇಕೆಂಬ ಹುಚ್ಚು ಇದ್ದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕಂಪನಿ ಸೆಕ್ರೆಟರಿ ಕೋರ್ಸ್ ಮೂರು ವರ್ಷದ್ದಾಗಿದ್ದು ಒಮ್ಮೆ ಇದನ್ನು ಪೂರ್ಣಗೊಳಿಸಿದರೆ ಜಿಲ್ಲಾಧಿಕಾರಿಗೆ ಸಮನಾದ ಹುದ್ದೆ ಕಂಪನಿಗಳಲ್ಲಿ ಪಡೆಯಬಹುದು. 24 ಲಕ್ಷ ಕಂಪನಿಗಳಿದ್ದು ಕೇವಲ 60 ಸಾವಿರ ಕಂಪನಿ ಸೆಕ್ರೆಟರಿಗಳಿದ್ದಾರೆ. ಕಂಪನಿ ಸೆಕ್ರೆಟರಿ ಹುದ್ದೆಗೆ ಸಾಕಷ್ಟು ಬೇಡಿಕೆಯಿದೆ. ಕಂಪನಿ ಸೆಕ್ರೆಟರಿ ಕೋರ್ಸ್ ಪೂರ್ಣಗೊಳಿಸಲು ಮಾಡಿಕೊಳ್ಳಬೇಕಾದ ಸಿದ್ಧತೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.ಬೆಂಗಳೂರು ರಾಮಕೃಷ್ಣ ಆಸ್ಪತ್ರೆ ಕಂಪನಿ ಸೆಕ್ರೆಟರಿ ಹಾಗೂ ಕಾನೂನು ಸಲಹೆಗಾರಾರದ ಗೀತಾ ಶಶಿಧರ್ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಸಾಮರ್ಥ್ಯವಿದ್ದು ಹೊರಪ್ರಪಂಚಕ್ಕೆ ತೆರೆದುಕೊಳ್ಳಬೇಕಾಗಿದೆ. ಸಾಧನೆ ಮಾಡಬೇಕಾದರೆ ವಿದ್ಯಾರ್ಥಿಗಳು ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಾವು ಏನಾಗಬೇಕೆಂಬ ಕನಸು ಕಾಣಬೇಕು. ಯಾವ ಸಾಧನೆ ಮಾಡಿದರೆ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ತಂದೆ, ತಾಯಿಯರ ಗೌರವ ಹೆಚ್ಚಾಗುತ್ತದೆ ಎಂದು ಅರಿತುಕೊಳ್ಳಬೇಕು. ಉನ್ನತವಾದುದನ್ನು ಸಾಧಿಸಿದಾಗ ಮಾತ್ರ ಬದುಕು ಸಾರ್ಥಕವಾಗಲಿದೆ ಎಂದರು.
ಸಭೆಯಲ್ಲಿ ಬೆಂಗಳೂರಿನ ಕರ್ನಾಟಕ ಸ್ಟೇಟ್ ಬೆವರೇಜಸ್ ಕಾರ್ಪೊರೇಷನ್ ಕಂಪ್ಲೈನ್ ಅಧಿಕಾರಿ ಅಂಬಿಕಾ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಧನಂಜಯ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಆರ್.ಕೆ.ಪ್ರಸಾದ್, ಉದ್ಯೋಗ ಕೋಶದ ಸಂಚಾಲಕಿ ಬಿ.ಟಿ.ರೂಪ ಉಪಸ್ಥಿತರಿದ್ದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಾಗೂ ಡಿಸಿಎಂಸಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.