)
ಕನ್ನಡಪ್ರಭ ವಾರ್ತೆ ದಾವಣಗೆರೆ
ಐದು ವಾರಗಳ ವಾರದ ಸಂತೆಯನ್ನು ಮೊದಲ ಭಾನುವಾರದಿಂದ ಆರಂಭಿಸಲಾಯಿತು. ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಎಡೆ ಜಾತ್ರೆ ಮಾಡಿ, ಉತ್ತಮ ಮಳೆ, ಬೆಳೆಗಾಗಿ, ಸಮೃದ್ಧಿ ನೆಲೆಸುವಂತೆ ಅನುಗ್ರಹಿಸುವಂತೆ ತಾಯಿಗೆ ಬೇಡಿಕೊಂಡು ಪೂಜೆ ಸಲ್ಲಿಸಲಾಯಿತು. ಅದಾದ ನಂತರ ಐದು ವಾರದ ವಾರದ ಸಂತೆಯನ್ನು ಎಂದಿನಂತೆ ನಡೆಯುವ ಪ್ರದೇಶದ ಬದಲಿಗೆ ದುಗ್ಗಮ್ಮನ ಗುಡಿ ಪ್ರದೇಶದಲ್ಲಿ ಭಾನುವಾರ ನಡೆಸಿ, ಮಳೆಯನ್ನು ಕರುಣಿಸುವಂತೆ ಭಕ್ತರು ತಾಯಿ ದುಗ್ಗಮ್ಮನ ಮೊರೆ ಹೋದರು.
ವಾಡಿಕೆಯಂತೆ ಬರಬೇಕಾದ ಮಳೆಗಳು ಕೈ ಕೊಟ್ಟಾಗ, ಬರ ಆವರಿಸಿದಾಗ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಭಕ್ತರು ಮೊರೆಹೋಗುತ್ತಾರೆ. ಈ ಸಲವೂ ಮಳೆ ಕೈ ಕೊಡುತ್ತಿರುವ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಆಡಳಿತ ಯಂತ್ರ, ಭಕ್ತರು, ದಾವಣಗೆರೆ ಮಹಾ ಜನತೆಯು ಪದ್ಧತಿಯಂತೆ ದುಗ್ಗಮ್ಮನ ಮೊರೆ ಹೋಗಿ, ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ದುಗ್ಗಮ್ಮನ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಾದ ಹಳೆಪೇಟೆ, ಶ್ರೀ ಕನ್ಯಕಾ ಪರಮೇಶ್ವರ ದೇವಸ್ಥಾನ ರಸ್ತೆ, ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಇರುವ ಪ್ರದೇಶ, ಹೊಂಡದ ರಸ್ತೆ, ದೊಡ್ಡಪೇಟೆ ಭಾಗದಲ್ಲಿ ವಾರದ ಸಂತೆ ನಡೆಸುವ ಮೂಲಕ ಮಳೆ, ಬೆಳೆಗಾಗಿ ಶತಮಾನದಿಂದಲೂ ಬಂದ ಹಿರಿಯರ ಪದ್ಧತಿಯನ್ನು ಈ ಬಾರಿಯೂ ಮುಂದುವರಿಸಲಾಯಿತು.ಇಂಥ ಪೂಜೆ ಪದ್ಧತಿಗಳಿಂದ ದೇವಿಯ ಕೃಪೆಯೋ, ಪವಾಡವೋ ಅಥವಾ ಕಾಕತಾಳಿಯವೋ ಎಂಬಂತೆ ಭಾರಿ ಮಳೆಯಾದ ನಿದರ್ಶನಗಳಿವೆ. ಆಸ್ತಿಕರು, ನಾಸ್ತಿಕರು ತಮ್ಮ ಭಾವನೆಗೆ ತಕ್ಕಂತೆ ಅದನ್ನು ಅರ್ಥೈಸುತ್ತಾರೆ. ಆದರೆ, ಊರ ದೇವತೆ ಭಕ್ತರು ಮಾತ್ರ ಅಮ್ಮನ ಮೇಲೆ ನಂಬಿಕೆ ಇಟ್ಟು, ವಾರದ ಸಂತೆ ನಡೆಸುತ್ತಾರೆ. ಅಂತೆಯೇ, ವಾರದ ಸಂತೆಗೆ ಮುನ್ನ ಪೂಜೆ ಸಲ್ಲಿಸಿ, ಮಳೆ, ಬೆಳೆಗಾಗಿ ಪ್ರಾರ್ಥಿಸಲಾಯಿತು. ವ್ಯಾಪಾರಸ್ಥರು, ರೈತರು, ಸಾರ್ವಜನಿಕರೂ ಅಷ್ಟೇ ಶ್ರದ್ಧೆ, ಆಸಕ್ತಿಯಿಂದ ಸ್ಪಂದಿಸುವ ಮೂಲಕ ದುಗ್ಗಮ್ಮನ ಗುಡಿ ಬಳಿ ಸಂತೆ ಮಾಡಿ, ಸಮೃದ್ಧ ಮಳೆ, ಬೆಳೆಯಾಗಲಿ ಎಂಬುದಾಗಿ ದುಗಮ್ಮನಿಗೆ ಪ್ರಾರ್ಥಿಸಿದರು.
ದುಗ್ಗಮ್ಮನ ಗುಡಿ ಬಳಿ ಸಂತೆ ಮಾಡುವುದರಿಂದ ನಾಡಿನಾದ್ಯಂತ ಯಾವುದೇ ತೊಂದರೆ ಇಲ್ಲದೇ ಕಾಲಕಾಲಕ್ಕೆ ಉತ್ತಮ ಮಳೆ, ಬೆಳೆ ಬಂದು ರೈತಾಪಿ ಜನರು ಖುಷಿಯಾಗಿರುತ್ತಾರೆ. ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯುತ್ತವೆ ಎಂಬ ನಂಬಿಕೆ ಇದೆ. ರೈತರು, ವ್ಯಾಪಾರಿಗಳು ತಾವು ಬೆಳೆದ, ಖರೀದಿಸಿದ ಹೂವು, ಹಣ್ಣು, ಸೊಪ್ಪು, ತರಕಾರಿ, ಕಾಯಿ ಇತರೆ ಧಾನ್ಯಗಳನ್ನು ತಂದು ಈ ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಪ್ರತಿಯೊಬ್ಬರಿಗೂ ಉತ್ತಮ ವ್ಯಾಪಾರವಾಗುತ್ತದೆ. ಗ್ರಾಹಕರು, ಸಾರ್ವಜನಿಕರೂ ಇದಕ್ಕೆ ಸ್ಪಂದಿಸುತ್ತಾ ಬಂದಿದ್ದಾರೆ. ಭಕ್ತರ ಪ್ರಾರ್ಥನೆಗೆ ಕಿವಿಗೊಟ್ಟು, ದುಗ್ಗಮ್ಮ ಕೃಪೆ ತೋರಿ, ಸಮೃದ್ಧ ಮಳೆ, ಬೆಳೆಯನ್ನು ಕರುಣಿಸಲಿ ಎಂಬುದೇ ಎಲ್ಲರ ಪ್ರಾರ್ಥನೆಯಾಗಿದೆ.