ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸೈಬರ್ ವಂಚನೆ: ಮೂವರು ಆರೋಪಿಗಳ ಬಂಧನ

KannadaprabhaNewsNetwork | Published : Oct 30, 2023 12:31 AM

ಸಾರಾಂಶ

ಸಬ್ಬ್‌ ರಿಜಿಸ್ಟ್ರಾರ್ರ್‌ ಕಚೇರಿಯಲ್ಲಿ ಸೈಬರ್ರ್‌ ವಂಚನೆ;ಮೂವರ ಬಂಧನ
ಕನ್ನಡಪ್ರಭ ವಾರ್ತೆ ಮಂಗಳೂರು ನಗರದ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿದ ಹಲವರ ಬ್ಯಾಂಕ್‌ ಖಾತೆಗಳಿಂದ ಹಣ ವರ್ಗಾವಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಬಿಹಾರ ಮೂಲದ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ದೀಪಕ್‌ ಕುಮಾರ್‌ ಹೆಂಬ್ರಮ್‌ (33), ವಿವೇಕ್‌ ಕುಮಾರ್‌ ಬಿಸ್ವಾಸ್‌ (24), ಮದನ್‌ ಕಮಾರ್‌ (23) ಎಂದು ಗುರುತಿಸಲಾಗಿದೆ. ಆರೋಪಿಗಳಿಗೆ ಸಂಬಂಧಿಸಿದ 10 ಬ್ಯಾಂಕ್‌ ಖಾತೆಗಳಿಂದ 3,60,242 ರು. ವಹಿವಾಟು ಸ್ಥಗಿತಗೊಳಿಸಲಾಗಿದ್ದು, ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡು ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ತಿಳಿಸಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದಂತೆ 1000ಕ್ಕೂ ಹೆಚ್ಚು ನೋಂದಣೆ ಪತ್ರಗಳ ಪಿಡಿಎಫ್‌ ಮತ್ತು ಆಂಧ್ರ ಪ್ರದೇಶ ಹಾಗೂ ಇತರ ಕೆಲವು ರಾಜ್ಯಗಳ 300ಕ್ಕೂ ಅಧಿಕ ಪಿಡಿಎಫ್‌ ಪ್ರತಿಗಳನ್ನು ಆರೋಪಿಗಳು ಸಂಗ್ರಹಿಸಿಟ್ಟಿರುವುದು ತನಿಖೆಯ ವೇಳೆ ಕಂಡು ಬಂದಿದೆ. ಹೆಚ್ಚುವರಿ ತನಿಖೆಗಾಗಿ ಅರೋಪಿಗಳನ್ನು ಬಿಹಾರಕ್ಕೆ ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಿ ದಾಖಲೆ ಸಂಗ್ರಹಿಸಲಾಗುವುದು ಎಂದು ಅವರು ಹೇಳಿದ್ದಾರೆ. ಕಾವೇರಿ 2.0 ತಂತ್ರಾಂಶ ದುರ್ಬಳಕೆ: ಆರೋಪಿಗಳು ಆಸ್ತಿ ನೋಂದಣಿಗೆ ಸಂಬಂಧಿಸಿದ ಕಾವೇರಿ- 2.0 ವೆಬ್‌ಸೈಟ್‌ನಿಂದ ದಾಖಲಾತಿಗಳನ್ನು ಅಕ್ರಮವಾಗಿ ಪಡೆದು ಅದರಲ್ಲಿರುವ ಆಧಾರ್‌ ಸಂಖ್ಯೆ ಮತ್ತು ಹೆಬ್ಬೆರಳ ಗುರುತನ್ನು ಸಂಗ್ರಹಿಸಿ ಸ್ಕ್ಯಾನರ್‌ ಮೂಲಕ ಬೆರಳಚ್ಚು ಮುದ್ರೆಯನ್ನು ಸ್ಕ್ಯಾನ್‌ ಮಾಡಿ ಸಂತ್ರಸ್ತರ ಬ್ಯಾಂಕ್‌ ಖಾತೆಗಳಿಂದ ಹಣವನ್ನು ತಮ್ಮ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ಕಳೆದ ಆರು ತಿಂಗಳಿನಿಂದ ಮಂಗಳೂರು ನಗರದ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಆಸ್ತಿ ಹಾಗೂ ಇತರ ನೋಂದಣಿ ಮಾಡಿಸಿದ ಬಳಿಕ ಕೆಲ ನೋಂದಣಿದಾರರ ಹಣವು ಕಳೆದ ಎರಡು ತಿಂಗಳಿನಿಂದೀಚೆಗೆ ಅವರ ವಿವಿಧ ಬ್ಯಾಂಕ್‌ಗಳಿಂದ ಎಇಪಿಎಸ್‌ ಮೂಲಕ ವರ್ಗಾವಣೆ ಆಗಿರುವ ಬಗ್ಗೆ ಮಂಗಳೂರು ಸೆನ್‌ ಕ್ರೈ ಪೊಲೀಸ್‌ ಠಾಣೆಗೆ ಹಲವು ದೂರುಗಳು ಬಂದಿದ್ದು, 10 ದೂರುಗಳು ದಾಖಲಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ಹೇಳಿದರು.

Share this article