ಗದಗ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಶುಕ್ರವಾರ ಗದಗ ನಗರದ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆಗೆ ಆಗಮಿಸಿದ್ದ ಇಬ್ಬರು ಪ್ರತಿಭಟನಾಕಾರ ಮುಖಂಡರನ್ನು ಪೊಲೀಸರು ವಾಹನದಲ್ಲಿ ಕರೆದೊಯ್ಯುತ್ತಿದಂತೆ ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಪೊಲೀಸರು ಪುನಃ ಕರೆದುಕೊಂಡು ಬರಬೇಕು ಎಂದು ಎಬಿವಿಪಿ ಕಾರ್ಯಕರ್ತರು ಪಟ್ಟು ಹಿಡಿದು, ಅಲ್ಲಿಯವರೆಗೂ ನಾವು ಮನವಿ ಕೊಡಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಸಚಿವ ಎಚ್.ಕೆ. ಪಾಟೀಲ ಆಗಮಿಸುತ್ತಿದ್ದಂತೆ ಎಬಿವಿಪಿ ಮುಖಂಡರ ಬಿಡುಗಡೆ ಮಾಡಬೇಕು.ಆ ಮೇಲೆ ಮನವಿ ಕೊಡುವುದಾಗಿ ಹೇಳಿದರು.ಆನಂತರ ಸಚಿವರ ಸೂಚನೆಯ ಮೇರೆಗೆ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ಕರೆ ತಂದ ನಂತರ ಮನವಿ ಸಲ್ಲಿಸಿದರು. ಮನವಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚಳ ಮಾಡಬೇಕು. ಶಾಲಾ- ಕಾಲೇಜುಗಳು ಪ್ರಾರಂಭವಾದ ನಂತರ ವಿಳಂಬ ಮಾಡದೇ ಪ್ರವೇಶಾತಿ ನೀಡಬೇಕು. ವಿದ್ಯಾರ್ಥಿಗಳ ಶಾಲಾ-ಕಾಲೇಜು ಸಮಯದಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಬೇಕು. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ಏಕ ರೂಪ ಶೈಕ್ಷಣಿಕ ವೇಳಾಪಟ್ಟಿ ಜಾರಿ ಮಾಡಬೇಕು. ಬಸ್ ಪಾಸ್ ವಿತರಣೆ ಸರಿಯಾಗಿ ಮಾಡಬೇಕು. ಹಾಸ್ಟೇಲ್‌ಗಳ ಮೂಲಭೂತ ಸೌಲಭ್ಯಕ್ಕೆ ಆದ್ಯತೆ ನೀಡಬೇಕು ಎಂಬಿತ್ಯಾದಿ ಅಂಶಗಳನ್ನು ಒಳಗೊಂಡ ಮನವಿ ಸಲ್ಲಿಸಿದರು.