ಕನ್ನಡಪ್ರಭ ವಾರ್ತೆ ಹಾಸನ
ಇದೇ ವೇಳೆ ಎಬಿವಿಪಿ ಕರ್ನಾಟಕ ದಕ್ಷಿಣ ರಾಜ್ಯ ಕಾರ‍್ಯದರ್ಶಿ ಗೋಪಿ ರಂಗನಾಥ್ ಮತ್ತು ಮೋಹನ್ ಮಾತನಾಡಿ, ಕರ್ನಾಟಕವು ದೇಶದಲ್ಲೇ ಉತ್ತಮ ಶಿಕ್ಷಣ ವ್ಯವಸ್ಥೆ ಹಾಗೂ ಉನ್ನತ ಮಟ್ಟದ ವಿಶ್ವವಿದ್ಯಾಲಯಗಳಿಂದ ಹೆಸರುವಾಸಿಯಾಗಿದ್ದು, ಹೊರ ರಾಜ್ಯಗಳ ವಿದ್ಯಾರ್ಥಿಗಳೂ ಇಲ್ಲಿ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದಾರೆ. ಆದರೆ ಇದೇ ರಾಜ್ಯದಲ್ಲಿ ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಸರ್ಕಾರದ ವಿದ್ಯಾರ್ಥಿವೇತನದ ನಿರೀಕ್ಷೆಯಲ್ಲಿ ಕಾಲೇಜುಗಳಿಗೆ ದಾಖಲಾಗುತ್ತಿದ್ದು, ಅವರಿಗೆ ನೀಡಬೇಕಾದ ಆರ್ಥಿಕ ನೆರವು ಸಮಯಕ್ಕೆ ದೊರೆಯದಿರುವುದು ಶಿಕ್ಷಣದ ಹಕ್ಕಿನ ಮೇಲೆ ದೊಡ್ಡ ಹೊಡೆತವಾಗಿದೆ. ಎಸ್.ಎಸ್.ಪಿ. ತಂತ್ರಾಂಶದ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳಡಿ ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿವರ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದರೆ 2024-25ನೇ ಸಾಲಿನ ವಿದ್ಯಾರ್ಥಿವೇತನ ಇನ್ನೂ ಅನೇಕ ವಿದ್ಯಾರ್ಥಿಗಳ ಖಾತೆಗೆ ಜಮೆಯಾಗಿಲ್ಲ. ಎಸ್.ಎಸ್.ಪಿ. ಪೋರ್ಟಲ್‌ನಲ್ಲಿ ಮಂಜೂರಾಗಿದೆ ಎಂದು ತೋರಿದರೂ ಹಣ ಜಮೆಯಾಗದಿರುವುದು ವಿದ್ಯಾರ್ಥಿಗಳಲ್ಲಿ ಗೊಂದಲ ಮತ್ತು ಆತಂಕ ಉಂಟುಮಾಡಿದೆ ಎಂದರು.ರಾಜ್ಯದಲ್ಲಿ 5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ಕಾಯುತ್ತಿದ್ದು, ಅನೇಕರು ಶುಲ್ಕ ಪಾವತಿಸಲು, ವಸತಿ ಹಾಗೂ ಪುಸ್ತಕ ಖರ್ಚುಗಳನ್ನು
ಭರಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರ್ಥಿಕ ಕಾರಣಗಳಿಂದಲೇ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಧ್ಯದಲ್ಲೇ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಶಿಕ್ಷಣ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಎಚ್ಚರಿಸಿದರು.ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ರೈತ ವಿದ್ಯಾನಿಧಿ ಯೋಜನೆಯೂ ಸ್ಥಗಿತಗೊಂಡಿರುವುದರಿಂದ ರೈತರ ಮಕ್ಕಳ ಶಿಕ್ಷಣಕ್ಕೂ ದೊಡ್ಡ ಹೊಡೆತ ಬಿದ್ದಿದೆ ಎಂದು ದೂರಿದರು. ವಿದ್ಯಾರ್ಥಿವೇತನಕ್ಕೆ ಮೀಸಲಿಟ್ಟ ಅನುದಾನವನ್ನು ಬೇರೆ ಯೋಜನೆಗಳಿಗೆ ಅಥವಾ ಗ್ಯಾರಂಟಿಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ ಎಂದು ಆರೋಪಿಸಿದರು. ಇದಲ್ಲದೆ ಎಸ್.ಎಸ್.ಪಿ. ಪೋರ್ಟಲ್‌ನಲ್ಲಿ ಪದೇ ಪದೇ ತಾಂತ್ರಿಕ ದೋಷಗಳು ಕಾಣಿಸಿಕೊಂಡು, ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ತಾಂತ್ರಿಕ ಸಹಾಯವಾಣಿ ದುರ್ಬಲವಾಗಿದ್ದು, ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ಸಿಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎಬಿವಿಪಿ ಪ್ರಮುಖ ಬೇಡಿಕೆಗಳನ್ನು ಮುಂದಿರಿಸಿದ್ದು, ಕಳೆದ ಸಾಲಿನ ಬಾಕಿ ಇರುವ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು, ಎಸ್.ಎಸ್.ಪಿ. ಪೋರ್ಟಲ್‌ನ ದೋಷಗಳನ್ನು ಸರಿಪಡಿಸಬೇಕು, ವಿದ್ಯಾರ್ಥಿವೇತನ ಅನುದಾನದ ದುರ್ಬಳಕೆ ನಿಲ್ಲಿಸಬೇಕು, ಹಳೆಯ ಬಾಕಿ ಪಾವತಿಸುವ ಮುನ್ನ ಹೊಸ ಅರ್ಜಿಗಳನ್ನು ಆಹ್ವಾನಿಸಬಾರದು ಹಾಗೂ ಪ್ರತಿ ಜಿಲ್ಲಾ ಕೇಂದ್ರದಲ್ಲಿ ತಾಂತ್ರಿಕ ಸಹಾಯ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡುವುದು ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿದ್ದು, ಇನ್ನಾದರೂ ಸರ್ಕಾರ ಎಚ್ಚೆತ್ತು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.