ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಪ್ರಯಾಣದ ಮಧ್ಯೆ ಬಸ್‌ನಲ್ಲಿ 50 ಸಾವಿರಕ್ಕೂ ಹೆಚ್ಚು ನಗದು ಹಾಗೂ ಚನ್ನರಾಯಪಟ್ಟಣದ ವರ್ತಕರು ಸಹಿ ಮಾಡಿ ನೀಡಿದ 1.10 ಲಕ್ಷದ ಚೆಕ್ ಇದ್ದ ಬ್ಯಾಗ್‌ನ್ನು ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದರು. ಅದನ್ನು ಮಾಲೀಕರಿಗೆ ಮರಳಿ ಹಿಂತಿರುಗಿಸಿದ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ. ಚನ್ನರಾಯಪಟ್ಟಣದಿಂದ ಹಾಸನಕ್ಕೆ ಪ್ರಯಾಣಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚನ್ನರಾಯಪಟ್ಟಣ ಘಟಕಕ್ಕೆ ಸೇರಿದ ಸಾರಿಗೆ ಬಸ್ಸು ತಾಂತ್ರಿಕ ಸಮಸ್ಯೆಯಿಂದ ಬಸ್ಸನ್ನು ದುರಸ್ತಿಗಾಗಿ ಘಟಕಕ್ಕೆ ವಾಪಸ್ ತರು ಉದ್ದೇಶದಿಂದ ಪ್ರಯಾಣಿಕರನ್ನು ಬೇರೆ ವಾಹನಕ್ಕೆ ಕಳಿಸಲಾಯಿತು. ಬಸ್‌ನಲ್ಲಿ ಕಪಿಲ್ ಶರ್ಮಾ ಮತ್ತು ಬಾಲಕಿಶನ್ ಶರ್ಮ ಪ್ರಯಾಣಿಸುತ್ತಿದ್ದರು ಅವರು ಬದಲಿ ಬಸ್ಸನ್ನು ಏರುವಾಗ ಚನ್ನರಾಯಪಟ್ಟಣದ ವರ್ತಕರಿಂದ ಸಂಗ್ರಹಿಸಿದ್ದ ಹಣ ಹಾಗೂ 1.10 ಲಕ್ಷ ರು. ಮೌಲ್ಯದ ಸಹಿ ಮಾಡಿದ ಚೆಕ್ ಇರುವ ಬ್ಯಾಗ್‌ನ್ನು ಬಿಟ್ಟು ಇಳಿದು ಹೋಗಿದ್ದರು. ಬಸ್ ದುರಸ್ತಿಗಾಗಿ ಚನ್ನರಾಯಪಟ್ಟಣ ಘಟಕಕ್ಕೆ ವಾಪಸ್ ತಂದಾಗ ಬ್ಯಾಗ್ ಇರುವುದು ನಿರ್ವಾಹಕ ಜಗದೀಶ ಮತ್ತು ಚಾಲಕ ಎನ್.ಸಿ.ಕೃಷ್ಣೇಗೌಡರ ಕಣ್ಣಿಗೆ ಬಿದ್ದಿದೆ. ಬ್ಯಾಗ್ ಪರಿಶೀಲಿಸಿದ್ದಾರೆ. ಸಹಿ ಮಾಡಿದ ಕಾಲಿಚೆಕ್ ಹಾಗೂ ಹಣವಿರುವುದನ್ನು ಗಮನಿಸಿದ ನಿರ್ವಾಹಕ ಮತ್ತು ಚಾಲಕರು ಕೂಡಲೇ ಘಟಕ ವ್ಯವಸ್ಥಾಪಕರಿಗೆ ವಿಷಯ ತಲುಪಿಸಿದ್ದಾರೆ.ಘಟಕ ವ್ಯವಸ್ಥಾಪಕರಾದ ಜ್ಞಾನೇಶ್ ಅವರು ಬ್ಯಾಗನ್ನು ಪರಿಶೀಲಿಸಿ ಬ್ಯಾಗಿನಲ್ಲಿ ದೊರೆತ ಆಧಾರ್ ಕಾರ್ಡ್‌ನಿಂದ ದೂರವಾಣಿ ಸಂಖ್ಯೆಯನ್ನು ಪತ್ತೆ ಹಚ್ಚಿ ಅವರನ್ನು ಸಂಪರ್ಕಿಸಿದ್ದಾರೆ. ಹಣದ ಬ್ಯಾಗ್ ಕಳೆದುಕೊಂಡು ಗಾಬರಿಯಲ್ಲಿದ್ದ ಕಪಿಲ್ ಶರ್ಮಾ ಮತ್ತು ಬಾಲಕಿಶನ್ ಶರ್ಮ ಓಡೋಡಿ ಬಂದು ಚನ್ನರಾಯಪಟ್ಟಣ ಘಟಕವನ್ನು ಸಂಪರ್ಕಿಸಿದ್ದಾರೆ. ಘಟಕ ವ್ಯವಸ್ಥಾಪಕರು ಹಾಗೂ ಭದ್ರತಾ ಸಿಬ್ಬಂದಿಗಳು ಹಣದ ಬ್ಯಾಗ್ ಮಾಲೀಕ ಕಪಿಲ್ ಶರ್ಮಾ ಮತ್ತು ಬಾಲಕಿಶನ್ ಶರ್ಮ ವಿಳಾಸ ದಾಖಲೆಗಳನ್ನು ಖಚಿತಪಡಿಸಿಕೊಂಡು ಹಿಂತಿರುಗಿಸಿದ್ದಾರೆ. ಏತನ್ಮಧ್ಯೆ ಕಪಿಲ್ ಶರ್ಮಾ ಮತ್ತು ಬಾಲಕಿಶನ್ ಶರ್ಮ ಚನ್ನರಾಯಪಟ್ಟಣದ ಕಬ್ಬಿಣದ ಅಂಗಡಿಗಳಿಗೆ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದು ಅವರಿಂದ ಪಡೆದ ಹಣ ಹಾಗೂ ಸಹಿ ಮಾಡಿದ 1.10 ಲಕ್ಷ ರು ಮೌಲ್ಯದ ಚೆಕ್ ಗಳನ್ನು ಹಾಸನಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆನ್ನಲಾಗಿದೆ. ಈ ವೇಳೆ ಮಾನವೀಯತೆ ಮೆರೆದ ನಿರ್ವಾಹಕ ಮತ್ತು ಚಾಲಕರ ಕಾರ್ಯ ಕುರಿತು ಸಂಸ್ಥೆಯ ಮೇಲಧಿಕಾರಿಗಳು ಹಾಗೂ ಸಿಬ್ಬಂದಿ ಪಟ್ಟಣದ ನಾಗರಿಕರಿಂದ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.