ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಹಾಸನದಲ್ಲಿ ಎಬಿವಿಪಿ ಪ್ರತಿಭಟನೆ

KannadaprabhaNewsNetwork | Published : Apr 21, 2024 2:26 AM

ಸಾರಾಂಶ

ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಲವ್ ಜಿಹಾದಿಯ ಕಾರಣಕ್ಕಾಗಿ ಫಯಾಜ್ ಎಂಬಾತ ಮಾಡಿರುವ ಭೀಕರ ಹತ್ಯೆಯನ್ನು ಖಂಡಿಸಿ ಕೂಡಲೇ ಉನ್ನತ ಮಟ್ಟದ ತನಿಖೆ ಮಾಡುವಂತೆ ಒತ್ತಾಯಿಸಿ ಎಬಿವಿಪಿಯಿಂದ ವಿದ್ಯಾರ್ಥಿಗಳು ಹಾಸನ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.

ಹುಬ್ಬಳ್ಳಿಯಲ್ಲಿ ಎಂಸಿಎ ಓದುತ್ತಿದ್ದ ವಿದ್ಯಾರ್ಥಿನಿ । ಉನ್ನತ ತನಿಖೆಗೆ ಆಗ್ರಹ । ಅಪರ ಜಿಲ್ಲಾಧಿಕಾರಿಗೆ ಮನವಿ

ಕನ್ನಡಪ್ರಭ ವಾರ್ತೆ ಹಾಸನ

ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಲವ್ ಜಿಹಾದಿಯ ಕಾರಣಕ್ಕಾಗಿ ಫಯಾಜ್ ಎಂಬಾತ ಮಾಡಿರುವ ಭೀಕರ ಹತ್ಯೆಯನ್ನು ಖಂಡಿಸಿ ಕೂಡಲೇ ಉನ್ನತ ಮಟ್ಟದ ತನಿಖೆ ಮಾಡುವಂತೆ ಒತ್ತಾಯಿಸಿ ಎಬಿವಿಪಿಯಿಂದ ವಿದ್ಯಾರ್ಥಿಗಳು ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.

ಎಬಿವಿಪಿ ತಾಲೂಕು ಸಹ ಸಂಚಾಲಕ ಪ್ರೀತಮ್ ಹಾಗೂ ಚಿರಂತ್ ಮಾಧ್ಯಮದೊಂದಿಗೆ ಮಾತನಾಡಿ, ‘ಶಾಲಾ ಕಾಲೇಜುಗಳು ಜ್ಞಾನದ ದೇಗುಲಗಳು. ಇಂತಹ ದೇಗುಲದಲ್ಲಿ ಹಾಡಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠಳ ಭೀಕರ ಹತ್ಯೆ ಮಾಡಿರುವ ಘಟನೆ ನಿಜಕ್ಕೂ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದಂತಾಗಿದೆ. ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂಸಿಎ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಜಿಹಾದಿ ಕ್ರೂರ ಮನಸ್ಥಿತಿಯ ಫಯಾಜ್ ಎಂಬಾತ ಲವ್ ಜಿಹಾದಿಗಾಗಿ ಅವಳನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಈ ಪ್ರೀತಿಯನ್ನು ವಿದ್ಯಾರ್ಥಿನಿ ನಿರಾಕರಿಸಿದಕ್ಕಾಗಿ ಆಕೆಯ ಕಾಲೇಜಿಗೆ ಆಕ್ರಮವಾಗಿ ಪ್ರವೇಶಿಸಿ ಚಾಕುವಿನಿಂದ ೯ ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ’ ಎಂದು ಹೇಳಿದರು.

‘ಕಾಲೇಜಿನ ಒಳಗೆ ಬಂದು ವಿದ್ಯಾರ್ಥಿನಿಯನ್ನು ಹತ್ಯೆ ಮಾಡಲು ಸಾಧ್ಯವಾಗಿದೆ. ಕೊಲೆಗಾರನಿಗೆ ಕಾನೂನಿನ ಯಾವುದೇ ಭಯವೂ ಇಲ್ಲದೆ ರಾಜಾರೋಷವಾಗಿ ಕೃತ್ಯ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಘಟನೆ ನೋಡಿದರೆ ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಕುಸಿದು ಹೋಗಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುವಂತಾಗಿದೆ. ಈ ಘಟನೆಯಿಂದ ರಾಜ್ಯದ ವಿದ್ಯಾರ್ಥಿ ಸಮುದಾಯ ಭಯಭೀತಗೊಂಡಿದೆ. ಪೊಲೀಸರು ಕೂಡಲೇ ಸೂಕ್ತ ತನಿಖೆಯನ್ನು ಕೈಗೊಂಡು, ಅಪರಾಧಿಗೆ ಉಗ್ರ ಶಿಕ್ಷೆ ಆಗುವ ಹಾಗೆ ಮಾಡಿ ವಿದ್ಯಾರ್ಥಿನಿಯ ಕುಂಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ. ಜತೆಗೆ ರಾಜ್ಯಾದ್ಯಂತ ಪೊಲೀಸರು ಶಾಲಾ ಕಾಲೇಜುಗಳ ಬಳಿ ಮಪ್ತಿಯಲ್ಲಿ ಕಾರ್ಯನಿರ್ವಹಿಸಿ ಸಂಭಾವ್ಯ ಘಟನೆಗಳನ್ನು ತಡೆಯಲು ಪ್ರಯತ್ನಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಕಾರ್ಯ ಪ್ರವೃತ್ತರಾಗಬೇಕು. ಸರ್ಕಾರಗಳು ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಕಾನೂನಿನ ಭಯ ಇಲ್ಲದಾಗ ಮಾತ್ರ ಇಂತಹ ಘಟನೆಗಳು ನಡೆಯಲು ಸಾಧ್ಯ, ಕಾಲೇಜು ಕ್ಯಾಂಪಸ್‌ಗಳು ಸುರಕ್ಷತೆಯ ಕೇಂದ್ರಗಳಾಗಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಗಮನಹರಿಸಬೇಕು. ಉನ್ನತ ಮಟ್ಟದ ತನಿಖೆ ಮಾಡಬೇಕು’ ಎಂದರು.

ಶ್ರೀನಿವಾಸ್ ಸಾವರ್ಕರ್, ಜೀವನ್ ಇತರರು ಇದ್ದರು.

ನೇಹಾ ಹಿರೇಮಠ್‌ ಹತ್ಯೆಗೆ ಕಾರಣನಾದ ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಹಾಸನದಲ್ಲಿ ಎಬಿವಿಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.

Share this article