ಕಾಶ್ಮೀರ ಘಟನೆ ಖಂಡಿಸಿ ರಾಣಿಬೆನ್ನೂರಿನಲ್ಲಿ ಎಬಿವಿಪಿ ಪ್ರತಿಭಟನೆ

KannadaprabhaNewsNetwork |  
Published : Apr 24, 2025, 11:46 PM IST
ಫೋಟೊ ಶೀರ್ಷಿಕೆ: 24ಆರ್‌ಎನ್‌ಆರ್2ರಾಣಿಬೆನ್ನೂರು ನಗರದ ಬಸ್‌ನಿಲ್ದಾಣದ ಬಳಿ ಎಬಿವಿಪಿ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಉಪ ತಹಸೀಲ್ದಾರ ಶಾಮ ಗೊರವರ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಧರ್ಮ ವಿಚಾರಿಸಿ ಹತ್ಯೆ ಮಾಡಿರುವುದು ಖೇದಕರ ಸಂಗತಿ.

ರಾಣಿಬೆನ್ನೂರು: ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಗುರುವಾರ ನಗರದ ಬಸ್‌ ನಿಲ್ದಾಣದ ಬಳಿ ಪ್ರತಿಭಟಿಸಿ ಉಪತಹಸೀಲ್ದಾರ್ ಶಾಮ್ ಗೊರವರ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು. ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಅಭಿಷೇಕ ದೊಡ್ಡಮನಿ ಮಾತನಾಡಿ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಧರ್ಮ ವಿಚಾರಿಸಿ ಹತ್ಯೆ ಮಾಡಿರುವುದು ಖೇದಕರ ಸಂಗತಿ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬುದು ಸಾರ್ವಕಾಲಿಕ ಸತ್ಯವಾಗಿದೆ. ಅಲ್ಲಿನ ಪ್ರತ್ಯೇಕವಾದದ ಮನಸ್ಥಿತಿ ಬದಲಾಯಿಸಲು ಹಾಗೂ ಜನಜೀವನ ಸ್ಥಿತಿಗತಿಗಳನ್ನು ಸ್ಥಿರಗೊಳಿಸಿ ಶಾಂತಿ ನೆಲೆಸುವಂತಾಗಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಆದರೂ ಅಲ್ಲಿನ ಭಯೋತ್ಪಾದಕ ನುಸುಳುಕೋರರ ಹಾವಳಿ ತಡೆಗಟ್ಟಲು ಸಾಧ್ಯವಾಗಿಲ್ಲ. ಇತ್ತೀಚೆಗೆ ವಲಸೆ ಕಾರ್ಮಿಕರ ಮೇಲಿನ ದಾಳಿಗಳು, ಮಾರುಕಟ್ಟೆಗಳಲ್ಲಿನ ದಾಳಿಗಳನ್ನು ಗಮನಿಸಿದಾಗ ಭಾರತದ ಏಕತೆಗೆ ಉಗ್ರರು ತೀವ್ರ ಸವಾಲೊಡ್ಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಉಗ್ರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡು ತಕ್ಕ ಉತ್ತರ ನೀಡುವಂತೆ ಆಗ್ರಹಿಸಿದರು. ಎಬಿವಿಪಿ ನಗರ ಕಾರ್ಯದರ್ಶಿ ಯಲ್ಲಮ್ಮ ಆರೇರ, ಭೀಮೇಶ ಕೋಕಾಳೆ, ಪುನೀತ್ ಡೊಡ್ಡಗೌಡರ, ಆದಿತ್ಯ ಅಳಗಿಲವಾಡ, ಧನುಷ ಲಕ್ಕನಗೌಡ್ರ, ರಮ್ಯಾ ಮುದ್ದಪ್ಪಳವರ, ಕಾವ್ಯಾ ಓದೇಗೌಡರ, ವೀಣಾ ಶಿಗ್ಲಿ, ವೈಷ್ಣವಿ ಕಂಬಳಿ, ಶ್ರುತಿ ಆರ್.ಎಂ. ಸೇರಿದಂತೆ ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಕೃತಿ ಮೆರೆದ ಉಗ್ರರಿಗೆ ತಕ್ಕ ಶಾಸ್ತಿಯಾಗಲಿ

ರಟ್ಟೀಹಳ್ಳಿ: ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಹಾಗೂ ದಾಳಿಯಲ್ಲಿ ಮೃತರಾದ ಹಿಂದೂಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಾಲೂಕು ಬಿಜೆಪಿ ಕಾರ್ಯಕರ್ತರು ಹಳೇ ಬಸ್‌ ನಿಲ್ದಾಣ ಬಳಿ ಸರ್ಕಲ್‌ನಲ್ಲಿ ಗುರುವಾರ ಶ್ರದ್ಧಾಂಜಲಿ ಸಲ್ಲಿಸಿದರು.ನಂತರ ಮಾತನಾಡಿದ ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ ಅವರು, ಆರ್ಟಿಕಲ್ 370 ವಿಧಿ ರದ್ದಾದ ನಂತರ ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಜನತೆ ಶಾಂತಿಯುತ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನ ಪೋಷಿತ ಉಗ್ರರು ಅಮಾಯಕ ಹಿಂದೂಗಳನ್ನು ಕೊಂದು ವಿಕೃತಿ ಮೆರೆದಿದ್ದಾರೆ. ದಾಳಿಗೆ ತಕ್ಕ ಪ್ರತಿಕಾರವಾಗಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ದಾಳಿ ನಡೆದ ಸಂದರ್ಭದಲ್ಲಿ ಪಾಕಿಸ್ತಾನದ ಒಳಗೆ ನುಗ್ಗಿ ಉಗ್ರರ ನೆಲೆಗಳನ್ನು ಹೊಡೆದುರುಳಿಸಿದ 52 ಇಂಚಿನ ಎದೆಗಾರಿಕೆ ನರೇಂದ್ರ ಮೋದಿ ಹಾಗೂ ಭಾರತೀಯ ಸೈನ್ಯಕ್ಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಸಿದ್ದು ಸಾವಕ್ಕಳವರ ಮಾತನಾಡಿ, ಅಮಾಯಕ ಹಿಂದೂಗಳನ್ನು ಕೊಂದ ಪಾಕಿಸ್ತಾನದ ಉಗ್ರರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡರಾದ ಡಿ.ಎಂ. ಸಾಲಿ, ಶಂಭಣ್ಣ ಗೂಳಪ್ಪನವರ, ಸಂದೀಪ ಪಾಟೀಲ್, ಮನೋಜ ಗೊಣೆಪ್ಪನವರ, ಸುಶೀಲ್ ನಾಡಿಗೇರ, ವೀರನಗೌಡ ಎಡಚಿ, ಮಾಲತೇಶ ಬೆಳಕೆರಿ, ರವಿ ಮುದ್ದಣ್ಣನವರ, ಮಂಜು ತಳವಾರ, ರಾಜುಗೌಡ ಪಾಟೀಲ್, ಹನುಮಂತಪ್ಪ ಗಾಜೇರ, ಜೆ.ಪಿ. ಪ್ರಕಾಶ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್