ಲಕ್ಷ್ಮೇಶ್ವರ:ರಾಜ್ಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವಂತೆ ಆಗ್ರಹಿಸಿ ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ರಸ್ತೆ ತಡೆ ಮಾಡಿ ಎಬಿವಿಪಿ ಸಂಘಟನೆಯು ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಎಬಿವಿಪಿ ಸಂಘಟನೆಯ ತಾಲೂಕು ಸಂಚಾಲಕ ಚಂದ್ರು ಕುಂದಗೋಳ ಮಾತನಾಡಿ, ರಾಜ್ಯ ಸರ್ಕಾರ ಕಳೆದ 2023-24ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ಇದುವರೆಗೂ ನೀಡದೆ ಇರುವುದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕಲ್ಲು ಹಾಕಿದಂತಾಗಿದೆ. ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ಮೂಲಕ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ನೀಡದೆ ಇರುವುದರಿಂದ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಪರದಾಡುವಂತಾಗಿದೆ. ವಿದ್ಯಾರ್ಥಿ ವೇತನದಿಂದ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅನುಕೂಲವಾಗುತ್ತದೆ. ಈ ವರ್ಷ ಬರಗಾಲ ಇರುವುದರಿಂದ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿ ವೇತನ ನೀಡುವುದರಿಂದ ಪಾಲಕರಿಗೆ ಆರ್ಥಿಕವಾಗಿ ಸಹಾಯ ನೀಡಿದಂತಾಗುವ ಜೊತೆಯಲ್ಲಿ ಪಠ್ಯ ಪುಸ್ತಕ ಮೊದಲಾದ ವಸ್ತುಗಳನ್ನು ಖರೀದಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು. ಈ ವೇಳೆ ಮಹಾಂತೇಶ ಮಣಕವಾಡ ಮಾತನಾಡಿ, ರಾಜ್ಯ ಸರ್ಕಾರ ಸ್ತ್ರೀ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ವಿದ್ಯಾರ್ಥಿಗಳು ಬಸ್ ಹತ್ತುವಲ್ಲಿ ಹೈರಾಣಾಗಿ ಹೋಗುವಂತಾಗಿದೆ. ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್‌ಗಳು ಸಿಗದೆ ಇರುವದರಿಂದ ಶಾಲಾ ಕಾಲೇಜುಗಳಿಗೆ ಹೋಗಲು ಆಗುತ್ತಿಲ್ಲ. ಇದು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಂಚಕಾರ ತರುವ ಕಾರ್ಯ ಮಾಡಿದೆ ಎಂದರೆ ತಪ್ಪಾಗಲಾರದು. ಆದ್ದರಿಂದ ರಾಜ್ಯ ಸರ್ಕಾರ ಶೀಘ್ರದಲ್ಲಿ ಹೆಚ್ಚಿನ ಬಸ್‌ಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಅಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಶರಣಪ್ಪ ಶಿವನಗೌಡ್ರ, ಸಂಜನಾ ಪಾಟೀಲ, ಸ್ವಾತಿ ಗೊಜನೂರ, ಕುಸುಮಾ ಸ್ವಾಮಿ, ಅನಿಲ ಜೋಶಿ, ಸಾಗರ ಮೆರವಾಡೆ. ಈರಣ್ಣ ಬಡಿಗೇರ, ದ್ರಾಕ್ಷಾಯಣಿ ಹುಡೇದ, ರಾಜಶೇಖರ ಅಕ್ಕೂರ, ಗಂಗಾಧರ ಸವಣೂರ, ಅರುಣ ಕಳ್ಳಿಹಾಳ, ಅನಿಲ ಜೋಗಿ, ಪ್ರೇಮಾ ಮುದಗಲ್ಲ ಸೇರಿದಂತೆ ಪಟ್ಟಣದ ಪಿಯು ಕಾಲೇಜು ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ಲಕ್ಷ್ಮೇಶ್ವರ ತಾಲೂಕು ಎಬಿವಿಪಿ ಸಂಘಟನೆಯು ವಿದ್ಯಾರ್ಥಿ ವೇತನ ನೀಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿದರು.