ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯಲ್ಲಿ ಕಸಾಪದಿಂದ ಕನ್ನಡ ಡಿಂಡಿಮ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಪ್ರಪಂಚದಲ್ಲಿ 3 ಸಾವಿರ ಭಾಷೆಗಳಿದ್ದು, ಅವುಗಳಲ್ಲಿ ಇತ್ತೀಚಿನ ಸಂಶೋಧನೆಗಳ ಪ್ರಕಾರ ಕನ್ನಡ ಭಾಷೆ ಬಳಸುವವರ ಸಂಖ್ಯೆ 21 ಸ್ಥಾನದಲ್ಲಿದೆ ಎಂದು ಕಸಾಪ ಬಾಳೆಹೊನ್ನೂರು ಹೋಬಳಿ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಚೇತನ ತಿಳಿಸಿದರು.
ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯಲ್ಲಿ ತಾಲೂಕು ಕಸಾಪ ಏರ್ಪಡಿಸಿದ್ದ ಕನ್ನಡ ಡಿಂಡಿಮ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಂಪರೆ ಕುರಿತು ಉಪನ್ಯಾಸ ನೀಡಿದರು. ನಮ್ಮ ನಾಡಿನ ಮಣ್ಣನ್ನು ತಾಯಿಗೆ ಹೋಲಿಸುವ ಸಂಸ್ಕಾರ ಇರುವ ದೇಶ ಭಾರತ ಮಾತ್ರ. ಭಾಷೆ ಎನ್ನುವುದು ಇಲ್ಲದೆ ಇದ್ದಿದ್ದರೆ ನಮ್ಮ ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ನೆಲಗಟ್ಟಿನ ತಿಲೋತ್ತಮರು ಕತ್ತಲೆಯಲ್ಲಿ ಇರಬೇಕಾಗಿತ್ತು. 3ನೇ ಶತಮಾನದಲ್ಲಿ ಮೊದಲು ಭಾಷೆ ಬಳಕೆಯಾಗಿದೆ. ದ್ರಾವಿಡ ಭಾಷೆಯಲ್ಲಿ ಬಹು ಮುಖ್ಯ ಭಾಷೆಯಾಗಿ ಕನ್ನಡ 2ನೇ ಸ್ಥಾನದಲ್ಲಿದ್ದು, ಬ್ರಾಹ್ಮಿ ಲಿಪಿಯಿಂದ ಕನ್ನಡ ಲಿಪಿ ಬಂದಿದೆ. ಕನ್ನಡ ಭಾಷೆ ವ್ಯಾಕರಣವನ್ನು ಸಂಸ್ಕೃತದಿಂದ ಪಡೆದುಕೊಂಡಿದ್ದೇವೆ. ಹಲ್ಮಿಡಿ ಶಾಸನದಲ್ಲಿ ಮೊದಲು ಕನ್ನಡ ಬಳಕೆಯಾಗಿದ್ದು ಹೆಮ್ಮೆಯ ವಿಚಾರವಾಗಿದೆ ಎಂದರು. ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಆಶಯ ಭಾಷಣ ಮಾಡಿ, ಅಕ್ಷರಗಳಿಂದ ರೂಪುಗೊಂಡ ಬರವಣಿಗೆ ಸಾಹಿತ್ಯ ಎನಿಸುತ್ತದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಾಹಿತ್ಯದಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು,ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಶ್ರೀಕಾಂತ್ ಉದ್ಘಾಟಿಸಿ ಮಾತನಾಡಿ, ಪ್ರಾಚೀನ, ಪುರಾತನವಾದ ಕನ್ನಡ ಭಾಷೆಗೆ ತನ್ನದೇ ಆದ ಸಾಹಿತ್ಯ ಇದೆ. ಆದರೂ ನಾವು ಶಾಸ್ತ್ರೀಯ ಸ್ಥಾನಮಾನ ಪಡೆದಕೊಳ್ಳಲು ಹೋರಾಟ ಮಾಡಬೇಕಾಗಿರುವುದು ವಿಷಾದಕರ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕನ್ನಡ ಭಾಷೆ ಗ್ರಾಮೀಣ ಸೊಗಡನ್ನು ಹೊಂದಿದ್ದು ಕನ್ನಡ ಮಾತನಾಡಲು ಯಾವುದೇ ಹಿಂಜರಿಕೆ ಬೇಡ. ಕಸಾಪದಿಂದ ನವೆಂಬರ್ ತಿಂಗಳಲ್ಲಿ ಕನ್ನಡ ಡಿಂಡಿಮ ಎಂಬ ವಿಶೇಷ ಕಾರ್ಯಕ್ರಮ ನಡೆಸುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಸುಂದರ ಕನ್ನಡ ಕೈ ಬರಹ ಸ್ಪರ್ಧೆ ಏರ್ಪಡಿಸಿದ್ದೇವೆ. ವಿದ್ಯಾರ್ಥಿಗಳು ಹೆಚ್ಚು ಪುಸ್ತಕಗಳನ್ನು ಓದುವ ಅಬ್ಯಾಸ ಬೆಳೆಸಿ ಕೊಳ್ಳಬೇಕು ಎಂದು ಕರೆ ನೀಡಿದರು. ಅತಿಥಿಯಾಗಿದ್ದ ಕಸಾಪ ಹೋಬಳಿ ಅಧ್ಯಕ್ಷೆ ಜುಬೇದ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕನ್ನಡ ಭಾಷೆ ಕುರಿತು ರಸ ಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ವಿಜೇತ ಮಕ್ಕಳಿಗೆ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಇದೇ ಸಂದರ್ಭದಲ್ಲಿ ಸೀಗುವಾನಿ ಶಾಲೆ ಶಿಕ್ಷಕಿ, ಉದಯೋನ್ಮುಖ ಬರಹಗಾರ್ತಿ ಸವಿನಾ ಅವರನ್ನು ಸನ್ಮಾನಿಸಲಾಯಿತು.