ಬಿತ್ತನೆಗೆ ಚುರುಕುಗೊಂಡ ಕೃಷಿ ಚಟುವಟಿಕೆ

KannadaprabhaNewsNetwork |  
Published : May 23, 2024, 01:09 AM IST
ರೈತರು ಬಿತ್ತನೆಗಾಗಿ ಭೂಮಿಯನ್ನು ಹದಗೊಳಿಸುತ್ತಿರುವುದು. | Kannada Prabha

ಸಾರಾಂಶ

ಕಳೆದ ವರ್ಷ ಹೆಸರು, ಕಡಲೆ ಬೆಳೆ ಮತ್ತು ವಿವಿಧ ಪ್ರಮುಖ ಬೆಳೆಗಳಿಗೆ ಯೋಗ್ಯ ಬೆಲೆ ಸಿಗದೆ ರೈತರು ಸಂಕಷ್ಟ ಅನುಭವಿಸಿದ್ದರು. ಈಗ ರೈತರು ಬಿತ್ತನೆ ಬೀಜ ಖರೀದಿಗಾಗಿ ಮತ್ತೆ ಸಾಲ ಮಾಡುವ ಸ್ಥಿತಿ ಉದ್ಭವವಾಗಿದೆ.

ಈಶ್ವರ ಜಿ. ಲಕ್ಕುಂಡಿ

ನವಲಗುಂದ:

ತಾಲೂಕಿನ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಅನ್ನದಾತರು ಆಶಾಭಾವನೆಯೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಬಿತ್ತನೆಗಾಗಿ ಭೂಮಿ ಹದಗೊಳಿಸುವ ಕಾರ್ಯ ಚುರುಕುಗೊಂಡಿದ್ದು, ಬಿತ್ತನೆಗೆ ಸಕಲ ಸಿದ್ಧತೆ ನಡೆದಿದೆ.

ತಾಲೂಕಿನಲ್ಲಿ ವಾಡಿಕೆಯಂತೆ 41 ಮಿಮೀಯಷ್ಟು ಮಳೆ ಆಗಬೇಕಿತ್ತು. ಆದರೆ, ಈಗಾಗಲೇ 43 ಮಿಮೀ ಮಳೆಯಾಗಿದೆ. ಅಣ್ಣಿಗೇರ ತಾಲೂಕಿನಲ್ಲಿ 35 ಮಿಮೀ ಮಳೆಯಾಗಬೇಕಾಗಿತ್ತು. ಆದರೆ, 78 ಮಿಮೀ ಮಳೆಯಾಗಿದೆ. ಹೀಗಾಗಿ ಬಿತ್ತನೆ ಕಾರ್ಯಕ್ಕೆ ರೈತರು ಹೊಲಗಳತ್ತ ಮುಖ ಮಾಡಿದ್ದು ಭೂಮಿ ಹದಗೊಳಿಸಿ ಬಿತ್ತನೆ ಬೀಜ, ಗೊಬ್ಬರ, ಖರೀದಿಯಲ್ಲಿ ನಿರತರಾಗಿದ್ದಾರೆ.

79 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ:

ನವಲಗುಂದ ತಾಲೂಕಿನಲ್ಲಿ 56,772 ಹೆಕ್ಟೇರ್‌ ಮತ್ತು ಅಣ್ಣಿಗೇರಿ ತಾಲೂಕಿನಲ್ಲಿ 23,679 ಹೆಕ್ಟೇರ್‌ ಪ್ರದೇಶ ಬಿತ್ತನೆ ಆಗುವ ಸಾಧ್ಯತೆಯಿದೆ. ಅದರಲ್ಲಿ ಶೇ. 90ರಷ್ಟು ಭೂಮಿಯಲ್ಲಿ ಹೆಸರು ಬೆಳೆ ಬಿತ್ತನೆಯಾಗುವ ಸಾಧ್ಯತೆಯಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಕಳೆದ ವರ್ಷ ಹೆಸರು, ಕಡಲೆ ಬೆಳೆ ಮತ್ತು ವಿವಿಧ ಪ್ರಮುಖ ಬೆಳೆಗಳಿಗೆ ಯೋಗ್ಯ ಬೆಲೆ ಸಿಗದೆ ರೈತರು ಸಂಕಷ್ಟ ಅನುಭವಿಸಿದ್ದರು. ಈಗ ರೈತರು ಬಿತ್ತನೆ ಬೀಜ ಖರೀದಿಗಾಗಿ ಮತ್ತೆ ಸಾಲ ಮಾಡುವ ಸ್ಥಿತಿ ಉದ್ಭವವಾಗಿದ್ದು, ಮುಂಗಾರು ಬಿತ್ತನೆಗೆ ₹100ಕ್ಕೆ ₹ 3ರಿಂದ ₹5ರ ವರೆಗೆ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಿದ್ದರೆ, ಇನ್ನು ಕೆಲವರು ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಬಂಗಾರ, ಮನೆ, ಹೊಲದ ಆಸ್ತಿಪತ್ರವಿಟ್ಟು ಸಾಲ ತೆಗೆದುಕೊಂಡು ಬಿತ್ತನೆ ಬೀಜ ಖರೀದಿಸಲು ಮುಂದಾಗಿದ್ದಾರೆ.

ಹೆಸರು ಬಿತ್ತನೆಯೇ ಹೆಚ್ಚು:

ಈ ಬಾರಿ ಅಣ್ಣಿಗೇರಿ ಮತ್ತು ನವಲಗುಂದ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ನವಲಗುಂದ ತಾಲೂಕಿನಲ್ಲಿ ಈ ಬಾರಿ ಅಂದಾಜು 26,079 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ, ಗೋವಿನಜೋಳ 13,584 ಹೆಕ್ಟೇರ್‌, ಹತ್ತಿ 16,028 ಹೆಕ್ಟೇರ್‌, ಶೇಂಗಾ 992 ಹೆಕ್ಟೇರ್‌, ಉದ್ದು 45 ಹೆಕ್ಟೇರ್‌, ಕಬ್ಬು 30 ಹೆಕ್ಟೇರ್‌ ಹಾಗೂ ವಿವಿಧ ಬೆಳೆಗಳು ಸೇರಿ 56,772 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆಯಿದೆ. ಇನ್ನು ಅಣ್ಣಿಗೇರಿಯಲ್ಲಿ ಹೆಸರು 10744 ಹೆಕ್ಟೇರ್‌, ಗೋವಿನಜೋಳ 1845 ಹೆಕ್ಟೇರ್‌, ಹತ್ತಿ 9658 ಹೆಕ್ಟೇರ್‌, ಶೇಂಗಾ 1397 ಹೆಕ್ಟೇರ್‌ ಹಾಗೂ ಇತರೆ ಬೆಳೆಗಳು ಸೇರಿ 23679 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಶಿವುಕುಮಾರ ಬೀರಣ್ಣವರ ತಿಳಿಸಿದ್ದಾರೆ.ಈರುಳ್ಳಿ, ಮೆಣಸಿನಕಾಯಿ ಬೆಳೆಯೇ ಹೆಚ್ಚು:

ಕಳೆದ ವರ್ಷಕ್ಕಿಂತ ಈ ಬಾರಿ ಅಣ್ಣಿಗೇರಿ ಮತ್ತು ನವಲಗುಂದ ತಾಲೂಕುಗಳಲ್ಲಿ ಹೆಚ್ಚು ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಗಳು ಬೆಳೆಯುವ ಸಾಧ್ಯತೆ ಇದೆ. ತೋಟಗಾರಿಕೆ ಇಲಾಖೆಯ 13400 ಹೆಕ್ಟೇರ್‌ ಪ್ರದೇಶಗಳಲ್ಲಿ ನವಲಗುಂದ ತಾಲೂಕಲ್ಲಿ ಈರುಳ್ಳಿ 4500 ಹೆಕ್ಟೇರ್‌, ಮೆಣಸಿನಕಾಯಿ 1400 ಹೆಕ್ಟೇರ್‌ ಬಿತ್ತನೆ ಸೇರಿದಂತೆ ಇತರೆ ತರಕಾರಿ ಬೆಳೆಗಳು ಬೆಳೆಯುವ ಸಾಧ್ಯತೆ ಇದೆ. ಇನ್ನು ಅಣ್ಣಿಗೇರಿಯಲ್ಲಿ ಈರುಳ್ಳಿ 1200 ಹೆಕ್ಟೇರ್‌, ಮೆಣಸಿನಕಾಯಿ 6200 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ಸಂಭವವಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಸಂಜೀವಕುಮಾರ ಗುಡಿಮನಿ ಕನ್ನಡಪ್ರಭಕ್ಕೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ