ಬಿತ್ತನೆ ಕಾರ್ಯ, ಹೊಲ ಹದಗೊಳಿಸುವತ್ತ ರೈತರ ಚಿತ್ತ । ಟ್ರ್ಯಾಕ್ಟರ್, ಎತ್ತುಗಳಿಗೆ ಭಾರಿ ಬೇಡಿಕೆಪರಶಿವಮೂರ್ತಿ ದೋಟಿಹಾಳ
ಕನ್ನಡಪ್ರಭ ವಾರ್ತೆ ಕುಷ್ಟಗಿಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆ ಆಗಿರುವುದರಿಂದ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಅನ್ನದಾತರು ಹೊಲ ಹದಗೊಳಿಸಿ ಬಿತ್ತನೆ ಪೂರ್ವದ ಕಾರ್ಯಕ್ಕೆ ಅಣಿಗೊಳಿಸುತ್ತಿದ್ದಾರೆ.
ತಾಲೂಕಿನ ದೋಟಿಹಾಳ, ತಾವರಗೇರಾ, ಕೇಸೂರ, ಮುದೇನೂರ, ಬೀಜಕಲ್, ಶಿರಗುಂಪಿ, ಜುಮಲಾಪುರ, ಗೋತಗಿ, ಹೆಸರೂರ, ಟಕ್ಕಳಕಿ, ಕವಲಬೋದುರ, ತೊನಸಿಹಾಳ ಸೇರಿದಂತೆ ವಿವಿಧ ಗ್ರಾಮದಲ್ಲಿನ ರೈತಾಪಿ ವರ್ಗದವರು ಇತ್ತೀಚೆಗೆ ಸುರಿದ ಕೃತಿಕಾ ಮಳೆಯನ್ನೇ ಆಸರೆಯನ್ನಾಗಿಟ್ಟುಕೊಂಡಿದ್ದು, ಮಳೆಯಿಂದ ನೆಲ ಹಸಿ ಆಗಿರುವ ಹಿನ್ನೆಲೆ ಬಿತ್ತನೆ ಪ್ರಾರಂಭ ಮಾಡಿರುವುದು ಕಂಡು ಬರುತ್ತಿದೆ.ಬಿತ್ತುವ ಕಾರ್ಯದಲ್ಲಿ ಉತ್ಸಾಹ:
ಕೃತಿಕಾ ಮಳೆ ಸುರಿಯುವ ಮೂಲಕ ರೈತರಲ್ಲಿ ಆಶಾವಾದ ಚಿಗುರಿಸಿದೆ. ಆಕಾಶದತ್ತ ಮುಖ ಮಾಡಿ ಕುಳಿತಿದ್ದ ನೇಗಿಲ ಯೋಗಿಗಳು ಈ ವರ್ಷದ ಮುಂಗಾರು ಬಿತ್ತನೆಗೆ ಭೂಮಿ ಹದಗೊಳಿಸಿ ಎಳ್ಳು, ಹೆಸರು, ಸೂರ್ಯಕಾಂತಿ, ತೊಗರಿ, ಮೆಕ್ಕೆಜೋಳ, ಸಜ್ಜಿ ಸೇರಿದಂತೆ ಇತರ ದವಸ ದಾನ್ಯಗಳನ್ನು ಬಿತ್ತುವ ಕಾರ್ಯದಲ್ಲಿ ಉತ್ಸಾಹದಿಂದ ರೈತರು ಪಾಲ್ಗೊಂಡಿದ್ದಾರೆ.ಮುಂಗಾರು ಬಿತ್ತನೆಗೆ ತಾಲೂಕಿನ ರೈತರು ಈಗಾಗಲೇ ಭೂಮಿ ಹದಗೊಳಿಸಿ ಬಿತ್ತನೆ ಮಾಡುತ್ತಿದ್ದು, ಕೃಷಿ ಕಾರ್ಯಕ್ಕೆ ಕೃಷಿ ಕೂಲಿ ಕಾರ್ಮಿಕರ ಕೊರತೆ ಇದ್ದು, ಬಹುತೇಕ ರೈತರು ಕೃಷಿ ಯಂತ್ರಗಳತ್ತ ಮುಖ ಮಾಡಿದ್ದಾರೆ. ಭೂಮಿ ಉಳುಮೆಗೆ ಟ್ರ್ಯಾಕ್ಟರ್ ಹಾಗೂ ಎತ್ತುಗಳಿಗೆ ಭಾರಿ ಬೇಡಿಕೆ ಕಂಡು ಬರುತ್ತಿದೆ ಎನ್ನಬಹುದು.
ಸಂಪ್ರದಾಯ:ತಾಲೂಕಿನ ದೋಟಿಹಾಳ ಹಾಗೂ ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿ ಕೂರಿಗೆಗೆ ಸೀರೆ ಉಡಿಸಿ ಅಲಂಕರಿಸಿ, ಉಡಿ ತುಂಬುವಂತಹ ಆಚರಣೆಗಳು ಚಾಲ್ತಿಯಲ್ಲಿದೆ. ಈ ಸಂಪ್ರದಾಯವನ್ನು ಇಲ್ಲಿಯ ರೈತರು ಮುಂದುವರಿಸಿಕೊಂಡು ಬಂದಿದ್ದಾರೆ. ಬಿತ್ತನೆಗೆ ಸಿದ್ಧಗೊಳ್ಳುವ ಕೂರಿಗೆಯನ್ನು ಮೊದಲು ಸಿಂಗರಿಸುತ್ತಾರೆ. ಪೂಜೆ ಮಾಡಿದ ಕೂರಿಗೆಯನ್ನು ಪುರುಷರು ಹೆಗಲ ಮೇಲೆ ಹೊತ್ತು ಹೊಲಗಳ ಕಡೆ ಸಾಗುತ್ತಾರೆ. ಇವರ ಹಿಂದೆ ಮಹಿಳೆಯರು ಬಿತ್ತನೆ ಬೀಜಗಳನ್ನು ತೆಗೆದುಕೊಂಡು ಹೊಲಗಳಿಗೆ ಹೋಗುವ ಸಂಪ್ರದಾಯವಿದೆ. ಇದನ್ನು ಅನೇಕ ರೈತಾಪಿ ಕುಟುಂಬಗಳು ನಡೆಸಿಕೊಂಡು ಬರುತ್ತಿವೆ.
ಅಧಿಕೃತ ಅಂಗಡಿಯಲ್ಲೆ ಖರೀದಿಸಿ:ಕುಷ್ಟಗಿ ತಾಲೂಕಿನ ರೈತರು ಅಧಿಕೃತವಾಗಿ ಗೊಬ್ಬರ ಹಾಗೂ ಬೀಜ ಮಾರಾಟ ಮಾಡುತ್ತಿರುವ ಅಂಗಡಿಗಳಲ್ಲಿ ಮಾತ್ರ ಖರೀದಿ ಮಾಡಬೇಕು. ಗ್ರಾಮಗಳಲ್ಲಿ ಬಂದು ಕಡಿಮೆ ಬೆಲೆಯಲ್ಲಿ ನೀಡುವಂತಹ ಅನಧಿಕೃತ ವ್ಯಾಪಾರಿಗಳ ಹತ್ತಿರ ಖರೀದಿ ಮಾಡಬಾರದು ಹಾಗೂ ತಮ್ಮಲ್ಲಿಟ್ಟುಕೊಂಡಿರುವ ಬಿತ್ತನೆಯ ಬೀಜಗಳನ್ನು ಬೀಜೋಪಚಾರ ಮಾಡಿದ ನಂತರ ಬಿತ್ತನೆಗೆ ಮುಂದಾಗಬೇಕು ಎಂದು ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ:ಮುಂಗಾರು ಹಂಗಾಮಿನ ಬಿತ್ತನೆಗೆ ಬೇಕಾಗುವ ರಸಗೊಬ್ಬರ ಹಾಗೂ ತೊಗರಿ, ಮೆಕ್ಕೆಜೋಳ, ಸಜ್ಜೆ, ಹೆಸರು, ಬೀಜಗಳನ್ನು ರೈತ ಸಂಪರ್ಕ ಕೇಂದ್ರದಲ್ಲಿ ವಿತರಣೆ ಮಾಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ.