ಮಹಾಜನ ವರದಿಯನ್ನೇ ಅಂತಿಮವೆಂಬ ನಿರ್ಣಯ ಅಂಗೀಕರಿಸಿ

KannadaprabhaNewsNetwork |  
Published : Mar 27, 2026, 03:00 AM IST
ಗಡಿವಿವಾದ ಸಂಬಂಧ ಮಹಾಜನ ವರದಿಯೇ ಅಂತಿಮ ಎಂಬ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಮುಖಂಡರು ಮೇಯರ್‌ ಪ್ರೀತಿ ಕಾಮಕರ ಅವರಿಗೆ ಮನವಿ ಸಲ್ಲಿಸಿದರು | Kannada Prabha

ಸಾರಾಂಶ

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ನಿರ್ಣಯಿಸುವಂತೆ ಕನ್ನಡಪರ ಸಂಘಟನೆಗಳಿಂದ ಮೇಯರ್‌ಗೆ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ ವರದಿಯೇ ಅಂತಿಮ ಹಾಗೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯಯನ್ನು ಬೆಳಗಾವಿ ಮಹಾನಗರ ಪಾಲಿಕೆಯ ಸರ್ವಸಾಧಾರಣ ಸಭೆಯಲ್ಲಿ ಅಂಗೀಕರಿಸಬೇಕೆಂದು ಆಗ್ರಹಿಸಿ ಬೆಳಗಾವಿ ನಗರದ 20ಕ್ಕೂ ಅಧಿಕ ಕನ್ನಡ ಸಂಘಟನೆಗಳು ಗುರುವಾರ ನೂತನ ಮೇಯರ್‌ ಪ್ರೀತಿ ಕಾಮಕರ ಹಾಗೂ ಉಪ ಮೇಯರ್‌ ಹನುಮಂತ ಕೊಂಗಾಲಿ ಅವರಿಗೆ ಮನವಿ ಸಲ್ಲಿಸಿದವು.

2005ರ ಅಕ್ಟೋಬರ್ 27ರಂದು ಬೆಳಗಾವಿ ಪಾಲಿಕೆಯು ಮಹಾರಾಷ್ಟ್ರ ಪರ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಿದ್ದನ್ನು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿರುವ ದಾವೆಗೆ ಪೂರಕ ದಾಖಲೆಯಾಗಿ ಬಳಸಿಕೊಂಡಿದೆ. ಈ ಹಿನ್ನೆಲೆ ಕನ್ನಡ ಸಂಘಟನೆಗಳು ಹೊಸ ನಿರ್ಣಯದ ಅಗತ್ಯವನ್ನು ಒತ್ತಿ ಹೇಳಿವೆ. ಅಂದಿನ ನಿರ್ಣಯದಲ್ಲಿ ಗ್ರಾಮವನ್ನು ಘಟಕವನ್ನಾಗಿ ಪರಿಗಣಿಸಿ, ಗಡಿಭಾಗ ಮರಾಠಿಗರ ಅಭಿಪ್ರಾಯದಂತೆ ಬೆಳಗಾವಿ ಸೇರಿದಂತೆ ನಿಪ್ಪಾಣಿ, ಕಾರವಾರ, ಬೀದರ, ಭಾಲ್ಕಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಕೋರಲಾಗಿತ್ತು. ಈ ನಿರ್ಣಯವು ಈಗಲೂ ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರದ ದಾವೆಯ ಭಾಗವಾಗಿದೆ.

ಪ್ರಸ್ತುತ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ಸದಸ್ಯರೇ ಬಹುಮತದಲ್ಲಿದ್ದು, ಒಟ್ಟು 58 ಸದಸ್ಯರಲ್ಲಿ 55 ಮಂದಿ ಕನ್ನಡಿಗರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಕನ್ನಡ ಪರ ನಿರ್ಣಯ ಅಂಗೀಕರಿಸುವುದು ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ಹಿತಾಸಕ್ತಿಗೆ ಬಲ ನೀಡುತ್ತದೆ ಎಂದು ಸಂಘಟನೆಗಳು ಮನವರಿಕೆ ಮಾಡಿಕೊಟ್ಟಿವೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಸರ್ವಸಾಧಾರಣ ಸಭೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಮಹಾಜನ ವರದಿಯೇ ಅಂತಿಮ ಎಂಬ ನಿರ್ಣಯ ಕೈಗೊಳ್ಳುವುದು ಇಂದಿನ ತುರ್ತಾಗಿದೆ ಎಂದು ಅವರು ಹೇಳಿದರು.ಕರ್ನಾಟಕ ಸರ್ಕಾರವೂ ವಿಧಾನಮಂಡಲದಲ್ಲಿ ಇದೇ ವಿಷಯವಾಗಿ ನಿರ್ಣಯ ಕೈಗೊಂಡಿರುವುದರಿಂದ, ಅದೇ ರೀತಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಿರ್ಣಯ ಅಂಗೀಕರಿಸುವುದು ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ಪರವಾದ ದೃಢ ದಾಖಲೆ ಆಗಲಿದೆ ಎಂದು ಮನವರಿಕೆ ಮಾಡಿದರು. ಕನ್ನಡಪರ ಸಂಘಟನೆಗಳ ಮನವಿಗೆ ಸ್ಪಂದಿಸಿದ ಮೇಯರ್‌ ಪ್ರೀತಿ ಕಾಮಕರ ಅವರು, ಈ ಕುರಿತು ವಿಶೇಷ ಸಭೆ ಕರೆಸಿ ಸೂಕ್ತ ನಿರ್ಣಯ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರ ನೇತೃತ್ವದಲ್ಲಿ ಕಿತ್ತೂರು ಕರ್ನಾಟಕ ಸೇನೆಯ ಮಹಾದೇವ ತಳವಾರ, ರಮೇಶ್ ಸೊಂಟಕ್ಕಿ, ಶ್ರೀನಿವಾಸ ತಾಳೂಕರ, ವಾಜಿದ ಹಿರೇಕೋಡಿ, ಬಲರಾಮ ಮಾಸೇನಟ್ಟಿ, ಹುಚ್ಚರೆಡ್ಡಿ ಶಿವರೆಡ್ಡಿ, ಮೈನುದ್ದಿನ ಮಕಾನದಾರ, ಮಹೇಶ ಶೀಗಿಹಳ್ಳಿ, ಪ್ರೇಮ ಚೌಗುಲಾ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಯೋಜನೆಗೆ ಸರ್ಕಾರ ಭೂಮಿಯನ್ನೇ ನೀಡಿಲ್ಲ
ಬೆಳಗಾವಿ ನಗರದಲ್ಲಿ ಸಡಗರದ ರಾಮನವಮಿ ಆಚರಣೆ