ಕನ್ನಡಪ್ರಭ ವಾರ್ತೆ ಬಂಟ್ವಾಳ
ಡಾ. ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ಪೂರಕವಾಗಿ ಸಂವಿಧಾನವನ್ನು ರಕ್ಷಣೆ ಮಾಡುವ ಕಾರ್ಯ ಇಂದು ನಡೆಯಬೇಕಾಗಿದ್ದು, ಪ್ರಜಾಪ್ರಭುತ್ವವೇ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಅಂಬೇಡ್ಕರ್ ಆಶಯದ ಪ್ರಕಾರ ನಡೆದುಕೊಳ್ಳುವ ಕೆಲಸವಾಗಬೇಕು ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ ಮಹದೇವಪ್ಪ ಹೇಳಿದರು.ಭಾನುವಾರ ಸಂಜೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಬಂಟ್ವಾಳ ತಾಲೂಕು ಆಶ್ರಯದಲ್ಲಿ ತಾಲೂಕು ಮಟ್ಟದ ಡಾ. ಬಿ.ಆರ್.ಅಂಬೇಡ್ಕರ್ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ನಮ್ಮ ಪ್ರೇರಣಾ ಶಕ್ತಿಯಾಗಿದ್ದು, ಅವರನ್ನು ಪೂಜಿಸುವುದಷ್ಟೇ ಅಲ್ಲ, ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ ಅವರು, ವೈಜ್ಞಾನಿಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು, ಧಾರ್ಮಿಕ ವಿಚಾರಗಳು ವೈಯಕ್ತಿಕವಾಗಿದ್ದು, ಸರ್ಕಾರದ ಆಯ್ಕೆಯಾಗಿರುವುದಿಲ್ಲ. ಸೌಹಾರ್ದತೆಯನ್ನು ಕಾಪಾಡುವುದು ನಮ್ಮ ಆಶಯವಾಗಿದ್ದು, ಸಂವಿಧಾನ ಪೀಠಿಕೆಯನ್ನು ಈ ಕಾರಣಕ್ಕಾಗಿಯೇ ಶಾಲೆಗಳಲ್ಲಿ ಓದಲು ಹೇಳಿದ್ದು, ಅದರ ಅರ್ಥವನ್ನೂ ಗ್ರಹಿಸುವ ಕೆಲಸ ಮಾಡಬೇಕು ಎಂದರು.ಜಿಂದಾಬಾದ್, ಜೈಕಾರಗಳು ಸರ್ವಾಧಿಕಾರವನ್ನು ಸೃಷ್ಟಿಸುತ್ತಿದ್ದು, ಇದು ಸಂವಿಧಾನಕ್ಕೆ ಅಪಾಯ ತಂದೊಡ್ಡುತ್ತದೆ. ಭಾರತ ಬಹುತ್ವದ ದೇಶ ಎಂಬುದು ಎಲ್ಲರಿಗೂ ಅರ್ಥವಾಗಬೇಕು, ಮೂಢನಂಬಿಕೆ ವಿರುದ್ಧ ಹೋರಾಟ, ಮಹಿಳೆಯರು, ದಲಿತರು ಹಿಂದುಳಿದವರ ಏಳಿಗೆಯ ಕುರಿತು ಗಮನಹರಿಸಬೇಕು ಎಂದರು. ಸಂವಿಧಾನವನ್ನು ನಾವು ರಕ್ಷಣೆ ಮಾಡಿದರೆ, ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಇಂದು ಅಂಬೇಡ್ಕರ್ ಭವನ ಸಹಿತ ಸರ್ಕಾರಿ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗಳು ಇಲ್ಲದ ಕಾರಣ ಸಮಸ್ಯೆಗಳು ಉಂಟಾಗುತ್ತಿದ್ದು, ಎಲ್ಲ ಸರ್ಕಾರಿ ಕಚೇರಿಗಳು ಒಂದೇ ಸೂರಿನಲ್ಲಿ ನಿರ್ಮಾಣವಾಗುವಂಥ ವ್ಯವಸ್ಥೆ ಕಲ್ಪಿಸಿದರೆ, ಪಾರ್ಕಿಂಗ್ ವ್ಯವಸ್ಥೆಗೂ ಸರಿಯಾದ ಯೋಜನೆ ರೂಪಿಸಿದರೆ ಅನುಕೂಲವಾಗುತ್ತದೆ ಎಂದರು.ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ತಾನು ಮಂತ್ರಿಯಾಗಿ ಅಧಿಕಾರದಲ್ಲಿದ್ದ ಸಂದರ್ಭ, ಡಾ. ಎಚ್.ಸಿ. ಮಹದೇವಪ್ಪ ಅವರು ಬಂಟ್ವಾಳ ಕ್ಷೇತ್ರಕ್ಕೆ ಸಾಕಷ್ಟು ಅನುದಾನವನ್ನು ಒದಗಿಸಿರುವುದನ್ನು ನೆನಪಿಸಿ, ಸೌಹಾರ್ದ ಸೇತುವೆ ಸಹಿತ ಹಲವು ಕೆಲಸಗಳು ಬಾಕಿ ಉಳಿದಿದ್ದು, ಅವುಗಳ ಕಡೆಗೂ ಗಮನಹರಿಸುವಂತೆ ಮನವಿ ಮಾಡಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲತಿ ಬಿ, ಅಧಿಕಾರಿಗಳಾದ ಭಾರತಿ, ಮಂಜುಳಾ, ತಹಸೀಲ್ದಾರ್ ಎಸ್.ಬಿ.ಕೂಡಲಗಿ, ತಾಪಂ ಇಒ ಮಹೇಶ್ ಹೊಳ್ಳ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸುನೀತ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಣಾಧಿಕಾರಿ ಮಂಜುನಾಥ್ ಸ್ವಾಗತಿಸಿದರು. ಶಿಕ್ಷಣ ಇಲಾಖೆಯ ಸುಜಾತಾ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದಿಂದ ಅಂಬೇಡ್ಕರ್ ಭವನದ ವರೆಗೆ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಜಾಥಾ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್ ಹಾಗೂ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಪೇಟ, ಶಾಲು ಸಹಿತ ಸನ್ಮಾನ ಮಾಡಲು ಇಲಾಖೆ ಏರ್ಪಡಿಸಿತ್ತು. ಸಚಿವರ ಸನ್ಮಾನದ ಬಳಿಕ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿತ್ತು. ಈ ಸಂದರ್ಭ ತನಗೆ ಸನ್ಮಾನ ಮಾಡುವ ಬದಲು ಮಾಜಿ ಸಚಿವ ರಮಾನಾಥ ರೈ ಅವರಿಗೆ ಮಾಡಲು ಶಾಸಕರು ಸೂಚಿಸಿ, ಅವರೇ ರಮಾನಾಥ ರೈ ಅವರಿಗೆ ಪೇಠ ತೊಡಿಸಿದರು. ಈ ನಡೆಯನ್ನು ಸಚಿವ ಎಚ್.ಸಿ. ಮಹದೇವಪ್ಪ ಶ್ಲಾಘಿಸಿ, ಚುನಾವಣೆ ಬಳಿಕ ಈರ್ವರೂ ಒಟ್ಟಾಗಿ ಅಭಿವೃದ್ಧಿಯ ಕಡೆಗಷ್ಟೇ ಗಮನಹರಿಸಬೇಕು, ಇದು ಬ್ಯೂಟಿ ಆಫ್ ಡೆಮಾಕ್ರಸಿ ಎಂದು ಹೇಳಿದರು.