ಕನ್ನಡಪ್ರಭ ವಾರ್ತೆ ಹಾಸನ
ನಗರದ ಎಂ. ಕೃಷ್ಣ ಕಾನೂನು ಕಾಲೇಜಿಗೆ ರಾಷ್ಟ್ರೀಯ ಮೌಲ್ಯಾಂಕನ ಹಾಗೂ ಮೌಲ್ಯಮಾಪನ ನ್ಯಾಕ್ ಪರಿಶೀಲನೆ ನಂತರ ಬಿ++ ಗ್ರೇಡ್ ಮಾನ್ಯತೆ ನೀಡಿದೆ ಎಂದು ಪ್ರಾಂಶುಪಾಲ ಡಾ. ಶ್ರೀನಿವಾಸ್ ತಿಳಿಸಿದರು.ನಗರದ ಎಂ.ಜಿ ರಸ್ತೆಯಲ್ಲಿರುವ ಕಾಲೇಜಿಗೆ ನ್ಯಾಕ್ ತಂಡವು ಡಿ.5 ಮತ್ತು 6ರಂದು ಎರಡು ದಿನಗಳ ಕಾಲ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ನ್ಯಾಕ್ ತಂಡದಲ್ಲಿ ಒಡಿಶಾದ ಕಾನೂನು ಯುನಿವರ್ಸಿಟಿಯ ಪ್ರೊಫೆಸರ್ ಡಾಲಿ ಜಬ್ಬಲ್, ಬಿಹಾರದ ಚಾಣಾಕ್ಯ ನ್ಯಾಷನಲ್ ಕಾನೂನು ಯುನಿವರ್ಸಿಟಿ ಪ್ರೊಫೆಸರ್ ಸುಭಾಷ್ ಚಂದ್ರ ರಾಯ್, ಮಹಾರಾಷ್ಟçದ ನವಲ್‌ಮಾಲ್ ಕಾನೂನು ಯುನಿವರ್ಸಿಟಿಯ ಪ್ರಾಂಶುಪಾಲ ಸುನಿತಾ ಅಧವ್ ಅವರು ಕಾಲೇಜಿನ ಸಮಗ್ರ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಬೆಳವಣಿಗೆಯ ಸ್ವರೂಪದ ವಿಸ್ತೃತ ಮಾಹಿತಿ ಪಡೆದಿದ್ದರು.
ನ್ಯಾಕ್ ಸದಸ್ಯರಿಗೆ ಕಾಲೇಜು ಪ್ರಾಂಶುಪಾಲರಾದ ಡಾ. ಶ್ರೀನಿವಾಸ ಮತ್ತು ಉಪನ್ಯಾಸಕ ಹಾಗೂ ನ್ಯಾಕ್ ಸಂಯೋಜಕ ಪ್ರೊ.ಚಂದ್ರಹಾಸ ಕಾಲೇಜಿನ ಸಂಪೂರ್ಣ ಮಾಹಿತಿ ನೀಡಿದ್ದರು. ಈ ಗ್ರೇಡ್ ಮುಂದಿನ 5ವರ್ಷಗಳ ಕಾಲ ಮುಂದುವರಿಯಲಿದ್ದು, ಕಾಲೇಜಿನ ವಾತಾವರಣ, ವಿದ್ಯಾರ್ಥಿಗಳಿಗೆ ಕಾಲೇಜಿನ ಸೌಕರ್ಯಗಳು, ಬೋಧನ ಕೌಶಲ್ಯ, ವಿದ್ಯಾರ್ಥಿಗಳ ಚಟುವಟಿಕೆ, ಗ್ರಂಥಾಲಯ ವ್ಯವಸ್ಥೆ, ಕಾಲೇಜಿನ ಆಡಳಿತ ವ್ಯವಸ್ಥೆ, ಶಿಸ್ತು, ಹಲವಾರು ವಿಚಾರಗಳನ್ನ ಪರಿಶೀಲಿಸಿದ ತಂಡವು ಮೆಚ್ಚುಗೆ ವ್ಯಕ್ತಪಡಿಸಿ ಬಿ++ ಮಾನ್ಯತೆ ನೀಡಿದೆ. ಕಳೆದ ಬಾರಿಯ ನ್ಯಾಕ್ ಭೇಟಿ ಸಂದರ್ಭ ಕಾಲೇಜಿಗೆ ಬಿ+ ಗ್ರೇಡ್ ಮಾನ್ಯತೆ ದೊರೆತಿತ್ತು. ಈ ಬಾರಿ ನ್ಯಾಕ್ ಸಮಿತಿ ಬಿ++ ಗ್ರೇಡ್ ಮಾನ್ಯತೆ ನೀಡಿದೆ.ಕಾಲೇಜು ಪ್ರಾರಂಭವಾಗಿ 50 ವರ್ಷ ಕಳೆದಿದ್ದು, ರಜತ ಮಹೋತ್ಸವ ಸಂಭ್ರಮದಲ್ಲಿರೋ ಕಾಲೇಜಿಗೆ ಈ ಬಾರಿ ಉತ್ತಮ ಗ್ರೇಡ್ ಬಂದಿರುವುದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಕಾಲೇಜು ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.ಕಾಲೇಜಿನ ಎಲ್ಲಾ ಉಪನ್ಯಾಸಕರು, ಆಡಳಿತ ವರ್ಗ, ವಿದ್ಯಾರ್ಥಿಗಳ ಅವಿರತ ಶ್ರಮವಿದಿಂದ ಈ ಗೌರವ ದೊರೆತಿದ್ದು, ಎಲ್ಲರಿಗೂ ಕಾಲೇಜು ಆಡಳಿತ ಮಂಡಳಿ, ಆಡಳಿತ ಮಂಡಳಿಯ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ, ಉಪಾಧ್ಯಕ್ಷರಾದ ಚಂದ್ರಶೇಖರ ಐಯರ್, ಕಾರ್ಯದರ್ಶಿ ಆರ್.ಟಿ.ದೇವೇಗೌಡ, ಖಜಾಂಚಿ ಶ್ರಿಧರ್, ವ್ಯವಸ್ಥಾಪಕರಾದ ಶ್ರೀ ಶಿವರಾಮ ಕೃಷ್ಣಯ್ಯ ಹಾಗೂ ಎಲ್ಲಾ ಸದಸ್ಯರು ಧನ್ಯವಾದ ತಿಳಿಸಿದ್ದಾರೆ.