ಕನ್ನಡಪ್ರಭ ವಾರ್ತೆ ಕಲಬುರಗಿ ದೇಶಾದ್ಯಂತ ಬಿಜೆಪಿ ಪಕ್ಷದಲ್ಲಿರುವ 226 ಕೇಂದ್ರ ಸಚಿವರು ಹಾಗೂ ಶಾಸಕರ ವಿರುದ್ಧ ಆರೋಪಗಳಿವೆ. ಪಶ್ಚಿಮ ಬಂಗಾಳದ ಸಿಎಂ ಸುವೇಂದು ಅಧಿಕಾರಿ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮೊದಲು ರಾಜೀನಾಮೆ ನೀಡಲಿ, ಬಳಿಕ ನಮ್ಮ ಸಚಿವ ವಾಗೇಂದ್ರ ಅವರ ರಾಜೀನಾಮೆ ಕುರಿತು ಮಾತನಾಡಲಿ ಎಂದು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತತಂತ್ರಜ್ಞಾನ ಸಚಿವ ಡಾ. ಅಜಯ್ ಸಿಂಗ್ ಬಿಜೆಪಿ ಆರೋಪಗಳು, ಧರಣಿಗೆ ತಿರುಗೇಟು ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿರುವ ಕುರಿತು ಪತ್ರಕರ್ತರು ಗಮನ ಸೆಳೆದಾಗ, ಅವರಿಗೊಂದು ನೀತಿ, ನಮಗೊಂದು ನೀತಿಯೇ? ಎಂದು ಪ್ರಶ್ನಿಸಿದರು.ಸಚಿವ ಬಿ. ನಾಗೇಂದ್ರ ವಿರುದ್ಧ ಕೇಳಿಬಂದಿರುವ 87 ಕೋಟಿ ರೂ. ಅಕ್ರಮದ ಆರೋಪಕ್ಕೆ ಸಂಬಂಧಿಸಿದಂತೆ ಹಣ ಸಂಪೂರ್ಣ ವಾಪಸ್ ಬಂದಿದೆ. ಈ ಕುರಿತು ಸ್ಪಷ್ಟನೆಯನ್ನೂ ನೀಡಲಾಗಿದೆ. ತಪ್ಪಿತಸ್ಥರು ಎಂದು ಸಾಬೀತಾಗಿಲ್ಲದಿರುವಾಗ ರಾಜೀನಾಮೆ ಕೇಳುವುದು ಏಕೆ? ಎಂದು ಪ್ರಶ್ನಿಸಿದ ಅಜಯ್ ಸಿಂಗ್, ತಪ್ಪಿತಸ್ಥರು ಎಂದು ಸಾಬೀತಾದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.ನಿರುದ್ಯೋಗ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಇದನ್ನು ಮರೆಮಾಚಲು, ‘ಒಂದು ದೇಶ–ಒಂದು ಚುನಾವಣೆ’ ಹಾಗೂ ಡಿಲಿಮಿಟೇಷನ್‌ನಂತಹ ವಿಚಾರಗಳತ್ತ ಜನರ ಗಮನವನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಇಂದಿನ ಯುವಕರಿಗೆ ಉದ್ಯೋಗ ಸಿಗದಿರುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿಲ್ಲ. ಕೇಂದ್ರ ಸರ್ಕಾರ, ಬಿಜೆಪಿಗರು ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತನಿಖಾ ವರದಿ ಸಿಎಂ ಬಳಿಯಿದೆ: ಕೆಕೆಆರ್‌ಡಿಬಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ ಸಂಬಂಧಿಸಿದ ಹಗರಣಗಳ ತನಿಖಾ ವರದಿ ಕುರಿತು ಪ್ರತಿಕ್ರಿಯಿಸಿದ ಸಚಿವರು, ತನಿಖಾ ವರದಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿಯಿದೆ. ಈ ಕುರಿತು ಅಂತಿಮ ತೀರ್ಮಾನವನ್ನು ಮುಖ್ಯಮುಖ್ಯಮಂತ್ರಿಗಳೇ ಕೈಗೊಳ್ಳಲಿದ್ದಾರೆ ಎಂದರು.ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಆರೋಪಗಳ ಕುರಿತು ಮಾತನಾಡಿದ ಅಜಯ್ ಸಿಂಗ್, ಇದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಮುಂದಿನ ವಾರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಎಂಎಲ್‌ಸಿ ಜಗದೇವ ಗುತ್ತೇದಾರ್, ಶಾಸಕರಾದ ಎಂ.ವೈ. ಪಾಟೀಲ್, ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹಾಗೂ ಶರಣು ಮೋದಿ ಇದ್ದರು.