ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ವಾಹನ ದುರ್ಬಳಕೆ ಆರೋಪ

KannadaprabhaNewsNetwork |  
Published : May 01, 2024, 01:28 AM IST
30ಕೆಆರ್ ಎಂಎನ್ 7.ಜೆಪಿಜಿರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ  | Kannada Prabha

ಸಾರಾಂಶ

ಹಾಲಿ ಕರ್ತವ್ಯದಲ್ಲಿ ಇದ್ದರೂ ಸಹ ನಿರ್ಲಕ್ಷದಿಂದ ಸದರಿ ಅಪರ ಜಿಲ್ಲಾಧಿಕಾರಿಗಳು ಈ ರೀತಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಜೆಡಿಎಸ್-ಬಿಜೆಪಿ ರಾಜಕೀಯ ಪಕ್ಷಗಳ ಪರ ಚುನಾವಣಾ ಕೆಲಸಕ್ಕೆ ವಾಹನ ಬಳಕೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ವಾಹನವನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಾದ ಅಪರ ಜಿಲ್ಲಾಧಿಕಾರಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ, ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ರವರು ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಪ್ರಾಧಿಕಾರದ ಅಧ್ಯಕ್ಷರ ವಾಹನ (KA - 42, M-6729)ವನ್ನು ಸಹಾಯಕ ಚುನಾವಣಾಧಿಕಾರಿಗಳು ಜಿಲ್ಲಾ ಗಡಿ ಮತ್ತು ಕ್ಷೇತ್ರದ ಗಡಿ ಬಿಟ್ಟು ಪ್ರತಿದಿನ ಮಂಡ್ಯ - ಮೈಸೂರು ಇತ್ಯಾದಿ ಕ್ಷೇತ್ರದಲ್ಲಿ ಜೆಡಿಎಸ್ - ಬಿಜೆಪಿ ಪಕ್ಷದ ಪರ ಸಂಚರಿಸಿ, ಆ ಪಕ್ಷದ ಪರ ಚುನಾವಣಾ ಪ್ರಚಾರ ಮಾಡಲು ಬಳಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇಂತಹ ಚುನಾವಣಾ ಸಂದರ್ಭದಲ್ಲಿಯೂ ಸಹ ಇವರು ಕೇಂದ್ರಸ್ಥಾನದಲ್ಲಿ ವಾಸವಿರದೇ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಲ್ಲದೇ ಸರ್ಕಾರದ ಹಣ ಈ ರೀತಿ ದುಂದುವೆಚ್ಚ ಮಾಡಲು ಇವರಿಗೆ ಯಾರು ಅನುಮತಿ ನೀಡಿದ್ದಾರೆ? ಹಾಗೂ ಈ ರೀತಿಯ ವಾಹನ ದುರ್ಬಳಕೆಗೆ ಯಾರು ಜವಾಬ್ದಾರರು ? ಎಂದು ಪ್ರಶ್ನಿಸಿದ್ದಾರೆ.

ಇಂತಹ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ಕೇಂದ್ರ ಸ್ಥಾನದಲ್ಲಿ ವಾಸವಿರಬೇಕಲ್ಲವೇ ? ಕೇಂದ್ರ ಸ್ಥಾನದಲ್ಲಿ ವಾಸವಿರದೇ ಪ್ರತಿದಿನ ಮಂಡ್ಯ-ಮೈಸೂರಿನಲ್ಲಿ ಒಂದು ಪಕ್ಷದ ಪರವಾಗಿ ಚುನಾವಣಾ ಪ್ರಚಾರಕ್ಕೆ ಓಡಾಡಲು ಅನುಮತಿ ನೀಡಿದವರು ಯಾರು ? ಯಾವ ಉದ್ದೇಶಕ್ಕೆ ಮಂಡ್ಯ-ಮೈಸೂರು ಇತ್ಯಾದಿ ಕ್ಷೇತ್ರದಲ್ಲಿ ವಾಹನ ಸಂಚರಿಸುತ್ತಿದೆ ? ಎಂದು ಆರೋಪಿಸಿದ್ದಾರೆ. ಪ್ರತಿದಿನ ಬೇರೆ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಸುತ್ತಾಡಿರುವ ಕುರಿತು ಮೊಬೈಲ್ ಲೊಕೇಷನ್ ಹಾಗೂ ವಾಹನ ಆ ಭಾಗದಲ್ಲಿ ಸಂಚರಿಸುತ್ತಿರುವ ಬಗ್ಗೆ ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ಪರಿಶೀಲಿಸಬಹುದಾಗಿದೆ. ಅಲ್ಲದೇ ಸದರಿ ವಾಹನಕ್ಕೆ ಡೀಸಲನ್ನು ಯಾರು ಭರಿಸುತ್ತಿದ್ದಾರೆ ? ತಮ್ಮಿಂದ ಭರಿಸದೇ ಪ್ರಾಧಿಕಾರದಿಂದ ಭರಿಸಲು ತಿಳಿಸಿರುತ್ತೀರಿ. ಈಗಾಗಲೇ ಪ್ರಾಧಿಕಾರ ನಷ್ಟದಲ್ಲಿದ್ದು, ಇಷ್ಟೊಂದು ಐಷಾರಾಮಿ ರೀತಿಯ ದುಂದುವೆಚ್ಚಗಳು ಎಷ್ಟು ಸರಿ? ಯಾವ ರೀತಿಯ ಲೆಕ್ಕ ಶೀರ್ಷಿಕೆಯಡಿ ಈ ರೀತಿಯ ಅನಾಪೇಕ್ಷಿತ ನಿಯಮ ಬಾಹಿರ ಸಂಚಾರಕ್ಕೆ ಹಣ ಭರಿಸಬೇಕು ? ಎಂದು ಪ್ರಶ್ನಿಸಿದ್ದಾರೆ.

ಹಾಲಿ ಕರ್ತವ್ಯದಲ್ಲಿ ಇದ್ದರೂ ಸಹ ನಿರ್ಲಕ್ಷದಿಂದ ಸದರಿ ಅಪರ ಜಿಲ್ಲಾಧಿಕಾರಿಗಳು ಈ ರೀತಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಜೆಡಿಎಸ್-ಬಿಜೆಪಿ ರಾಜಕೀಯ ಪಕ್ಷಗಳ ಪರ ಚುನಾವಣಾ ಕೆಲಸಕ್ಕೆ ವಾಹನ ಬಳಕೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಈ ಕೂಡಲೇ ಈ ತಪ್ಪಿತಸ್ಥ ಅಧಿಕಾರಿ ಮೇಲೆ ಪಕ್ಷಪಾತ ಮಾಡದೇ ನಿಯಮಾನುಸಾರ ಕಾನೂನು ರೀತ್ಯಾ ಶಿಸ್ತುಕ್ರಮ ಕೈಗೊಂಡು, ಈ ದುರ್ಬಳಕೆಯನ್ನು ತಡೆಯಬೇಕು.

ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿರುವುದರಿಂದ ಇಲ್ಲಿಯವರೆಗೂ ಆಗಿರುವ ಆರ್ಥಿಕ ನಷ್ಟವನ್ನು ಭರಿಸಿಕೊಳ್ಳಬೇಕು. ಅಧಿಕಾರಿಯನ್ನು ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಚುನಾವಣಾ ಕರ್ತವ್ಯದಿಂದ ನಿರ್ಬಂಧಿಸಿ, ಆದೇಶಿಸಲು ನ್ಯಾಯ ಸಮ್ಮತ ನಿಷ್ಪಕ್ಷಪಾತವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಎ.ಬಿ.ಚೇತನ್ ಕುಮಾರ್ ಮನವಿ ಪತ್ರದಲ್ಲಿ ಕೋರಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ