ಕಾನೂನು ಉಲ್ಲಂಘಿಸಿ ಮಿಮ್ಸ್ ನ ಪ್ರತ್ಯೇಕ ಕೊಠಡಿಯಲ್ಲಿ ಆರೋಪಿಗೆ ಚಿಕಿತ್ಸೆ

KannadaprabhaNewsNetwork |  
Published : Aug 25, 2026, 02:00 AM IST
24ಕೆಎಂಎನ್ ಡಿ23 | Kannada Prabha

ಸಾರಾಂಶ

ಮಂಡ್ಯ ನಗರದ ಮಿಮ್ಸ್ ಆಸ್ಪತ್ರೆಗೆ ನ್ಯಾಯಾಧೀಶರ ತಂಡ ದಿಢೀರ್ ಭೇಟಿ ನೀಡಿದ ವೇಳೆ ಶ್ರೀರಂಗಪಟ್ಟಣದ ಎಡಿಎಲ್ ಆರ್ ಆರೋಪಿ ಮಹಮದ್ ಹುಸೇನ್ ಗೆ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡುವ ಜೊತೆಗೆ ಓರ್ವ ಮಹಿಳೆಯೂ ಇರುವುದನ್ನು ಕಂಡು ವರದಿ ನೀಡುವಂತೆ ಜೈಲು ಸೂಪರಿಡೆಂಟ್, ಪೋಲೀಸ್ ಅಧಿಕಾರಿ ಹಾಗೂ ಮಿಮ್ಸ್ ಆಸ್ಪತ್ರೆ ಅಧೀಕ್ಷಕರಿಗೆ ನಿರ್ದೇಶನ ನೀಡಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಮಿಮ್ಸ್ ಆಸ್ಪತ್ರೆಗೆ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ತಂಡ ಸೋಮವಾರ ಸಂಜೆ ದಿಢೀರ್ ಭೇಟಿ ನೀಡಿದ ವೇಳೆ ಶ್ರೀರಂಗಪಟ್ಟಣದ ಎಡಿಎಲ್ ಆರ್ ಆರೋಪಿ ಮಹಮದ್ ಹುಸೇನ್ ಗೆ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡುವ ಜೊತೆಗೆ ಓರ್ವ ಮಹಿಳೆಯೂ ಇರುವುದನ್ನು ಕಂಡು ವರದಿ ನೀಡುವಂತೆ ಜೈಲು ಸೂಪರಿಡೆಂಟ್, ಪೋಲೀಸ್ ಅಧಿಕಾರಿ ಹಾಗೂ ಮಿಮ್ಸ್ ಆಸ್ಪತ್ರೆ ಅಧೀಕ್ಷಕರಿಗೆ ನಿರ್ದೇಶನ ನೀಡಿತು.

ಜಿಲ್ಲಾ ಸತ್ರ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಚಂದ್ರಶೇಖರ ಹಾಗೂ ಗೌರವಾನ್ವಿತ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶಶಿಧರ ಶೆಟ್ಟಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಬಾಲಸುಬ್ರಮಣಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಡಾ.ಮೋಹನ್ ರಾವ್ ನಲ್ವಡೆ ಹಾಗೂ ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಂ.ಆನಂದ್ ಅವರು ಆಸ್ಪತ್ರೆಗೆ ಅನಿರೀಕ್ಷಿತ ದಿಢೀರ್ ಭೇಟಿ ನೀಡಿ ಪರಿಶೀಲಿಸಿದಾಗ ಆರೋಪಿಗೆ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ, ಜೊತೆಗೆ ಒರ್ವ ಮಹಿಳೆ ಇರುವುದು ಕಂಡು ಈ ಬಗ್ಗೆ ಆಸ್ಪತ್ರೆ ಅಧೀಕ್ಷಕ ಶಿವಕುಮಾರ್ ಅವರನ್ನು ವಿಚಾರಿಸಿದ್ದಾರೆ.

ಈ ವೇಳೆ ಮಹಮದ್ ಹುಸೇನ್ ಒತ್ತಾಯ ಪೂರ್ವಕವಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ಇಲ್ಲ ಎಂದು ತಿಳಿಸಿದ್ದಾರೆ. ಸ್ಥಳದಲ್ಲೇ ಹಾಜರಿದ್ದ ಜೈಲು ಸೂಪರಿಡೆಂಟ್ ಅವರನ್ನು ವಿಚಾರಿಸಿದಾಗ ಜೈಲಿನ ವೈದ್ಯಾಧಿಕಾರಿ ಸಲಹೆ ಮೇರೆಗೆ ಆರೋಪಿ ಮಹಮ್ಮದ್ ಹುಸೇನ್ ರನ್ನು ಮಿಮ್ಸ್ ಆಸ್ಪತ್ರೆಗೆ ದಾಖಸಲಾಗಿದೆ. ಈ ಮಾಹಿತಿಯನ್ನು ನ್ಯಾಯಾಲಯಕ್ಕೆ ತಿಳಿಸದಿರುವುದು ಗೊತ್ತಾಗಿದೆ.

ನ್ಯಾಯಾಲಯದ ಅನುಮತಿ ಪಡೆಯದೆ ಅನಧಿಕೃತವಾಗಿ ಆರೋಪಿಯನ್ನು ಕಳೆದ ಆ.21 ರಿಂದ ಇಲ್ಲಿಯವರೆಗೂ ದಾಖಲಿಸಿರುವುದು ಸ್ಪಷ್ಟ ಕಾನೂನಿನ ಉಲ್ಲಂಘನೆ ಆಗಿದೆ. ಅಲ್ಲದೆ ಆರೋಪಿ ಕೋಣೆಯಲ್ಲಿ ಒಬ್ಬ ಮಹಿಳೆ ಇದ್ದು, ಮೇಲ್ನೋಟಕ್ಕೆ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ವರದಿ ನೀಡುವಂತೆ ಜೈಲು ಸೂಪರಿಡೆಂಟ್, ಪೋಲೀಸ್ ಅಧಿಕಾರಿ ಹಾಗೂ ಮಿಮ್ಸ್ ಆಸ್ಪತ್ರೆ ಅಧೀಕ್ಷಕರಿಗೆ ಸ್ಥಳದಲ್ಲೇ ನಿರ್ದೇಶನ ನೀಡಿತು.

ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆರೋಪಿ ಜೊತೆ ಇದ್ದ ಮಹಿಳೆಯನ್ನು ವಿಚಾರಿಸಲಾಗಿ ಆಕೆಯು ಆರೋಪಿಯ ಗೆಳತಿ ಎಂಬುದಾಗಿ ತಿಳಿದು ಬಂದಿದೆ.

ಈ ಆರೋಪಿಯು ಕಳೆದ ಜುಲೈ 2 ರಂದು ಶ್ರೀರಂಗಪಟ್ಟಣ ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಸರ್ಕಾರಿ ನೌಕರನ ಸೋಗಿನಲ್ಲಿ ಅಕ್ರಮ ಪ್ರವೇಶ ಮಾಡಿ ಅನಧಿಕೃತವಾಗಿ ಸರ್ಕಾರಿ ತಂತ್ರಾಂಶದಲ್ಲಿ ಆಕಾರ್ ಬಂದ್ ದಾಖಲೆಯನ್ನು ಡಿಜಿಟಲೀಕರಣ ಮಾಡಿರುವ ಮತ್ತು ರೆವಿನ್ಯೂ/ಸರ್ವೆ ಇಲಾಖೆ ವ್ಯವಹಾರ ಸಂಬಂಧ ಸರ್ಕಾರಿ ನಕಲಿ ದಾಖಲೆ ಸೃಷ್ಟಿಸಲು ಸಹಕಾರ ನೀಡಿರುವ ಆರೋಪವಿತ್ತು.

ಜಿಲ್ಲಾ ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಪಿ.ಪಿ.ಬ್ಯಾಟರಾಯಗೌಡ ಎಡಿಆರ್ ಎಲ್ ಸರ್ವೆ ಸೂಪರ್ ವೈಸರ್ ಮಹಮದ್ ಹುಸೇನ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಜುಲೈ 3 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆದ್ದಾರಿ ಸೇತುವೆ ದುರಸ್ತಿ ಮರೀಚಿಕೆ
ಜನಸಾಮಾನ್ಯರ ಕೆಲಸ ಮಾಡಿಕೊಡಲು ಪಕ್ಷ ಭೇದ ಬೇಡ: ಡಾ.ಕೆ.ಸುಧಾಕರ್