ಎಸ್ಪಿಗೆ ಬರ್ತ್‌ಡೇ ಶುಭಾಶಯ ಹೇಳಿದ ಆರೋಪಿ: ಚರ್ಚೆ

KannadaprabhaNewsNetwork | Published : Sep 3, 2024 1:40 AM

Accused wishes SP on birthday: Debate

- ವಾಟ್ಸಾಪ್‌ನಲ್ಲಿ ಫೋಟೋ ಸ್ಟೇಟಸ್‌ ಇಟ್ಟುಕೊಂಡ ಯುವಕ: ಟೀಕೆಕನ್ನಡಪ್ರಭ ವಾರ್ತೆ ಯಾದಗಿರಿ

ಜೀವ ಬೆದರಿಕೆ ಹಾಕಿದ ಹಾಗೂ ಅಕ್ರಮ ಶಸ್ತ್ರಾಸ್ತ್ರಗಳ ಹೊಂದಿದ ಆರೋಪದಡಿ ದಾಖಲಾದ ಪ್ರಕರಣಗಳ ಆರೋಪಿಯೊಬ್ಬ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹುಟ್ಟುಹಬ್ಬದ ದಿನದಂದು ಅವರ ಸರ್ಕಾರಿ ಮನೆಗೆ ತೆರಳಿ ಶುಭಾಶಯ ಹೇಳಿದ್ದಲ್ಲದೆ, ಅವರಿಂದ ಕೇಕು ತಿನ್ನಿಸಿಕೊಂಡಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.

ಕಳೆದ ವಾರ ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರ ಜನ್ಮದಿನದ ಪ್ರಯುಕ್ತ ಅನೇಕರು ಅವರಿಗೆ ಶುಭಾಶಯಗಳ ಹೇಳಿ ಬಂದಿದ್ದರು. ಎಸ್ಪಿ ಅವರಿಗೆ ಪರಿಚಿತ, ಕಲಬರಗಿಯಿಂದ ಬಂದಿದ್ದ ಸಂಘಟನೆಯೊಂದರ ಮಹಿಳೆಯರ ಗುಂಪಿನಲ್ಲಿದ್ದ ಯುವಕನೊಬ್ಬ ಹಂಚಿಕೊಂಡಿದ್ದ ಫೋಟೋ ಇದೀಗ ಚರ್ಚಾಸ್ಪದ ವಸ್ತು.

ಸಿದ್ರಾಮ ಎಂಬಾತ ಎಸ್ಪಿ ಅವರಿಗೆ ಜನ್ಮದಿನದ ಶುಭ ಹಾರೈಸಿದ್ದಲ್ಲದೆ, ಅವರಿಂದ ಕೇಕ್‌ ತಿನ್ನಿಸಿಕೊಂಡಿದ್ದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್‌ ಇಟ್ಟುಕೊಂಡಿದ್ದ. ಇದು ಅನೇಕರ ಹುಬ್ಬೇರಿಸಿತ್ತು. ಕಾರಣ, ಯಾದಗಿರಿ ಜಿಲ್ಲೆಯಲ್ಲಿ ನಡೆದಿದ್ದ ಇಂತಹ ಗಂಭೀರ ಪ್ರಕರಣಗಳಲ್ಲಿ ಆತ ವಿಚಾರಣೆ ಎದುರಿಸುತ್ತಿದ್ದಾನೆ ಎನ್ನಲಾಗಿದೆ.

- ಆತ ಯಾರೆನ್ನುವುದೇ ತಮಗೆ ಗೊತ್ತಿಲ್ಲ: ಎಸ್ಪಿ

ಈ ಕುರಿತು ಸೋಮವಾರ ಸಂಜೆ ತಮ್ಮನ್ನು ಸಂಪರ್ಕಿಸಿದ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಜಿ. ಸಂಗೀತಾ, ಆತ ಯಾರೆನ್ನುವುದೇ ತಮಗೆ ಗೊತ್ತಿಲ್ಲ ಎಂದರು.------

ಕೋಟ್‌-1 : ಗಂಭೀರ ಪ್ರಕರಣಗಳಲ್ಲಿ ಆರೋಪ ಹೊತ್ತವರು ನೇರವಾಗಿ ಜಿಲ್ಲಾ ಪೊಲೀಸ್‌ ಮುಖ್ಯಸ್ಥರನ್ನು ಭೇಟಿಯಾಗಿ ಜನ್ಮದಿನದ ಶುಭಾಶಯಗಳ ಹೇಳಿರುವುದು ನೋಡಿದರೆ ಕಾನೂನು ಸುವ್ಯವಸ್ಥೆ ಹೇಗಿದೆ ಅನ್ನೋದಕ್ಕೆ ಸಾಕ್ಷಿ.

- ಭೀಮುನಾಯಕ್‌, ಜಿಲ್ಲಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ, ಯಾದಗಿರಿ.

--

ಕೋಟ್-2 :

ತಮಗೆ ಪರಿಚಿತ ಕಲಬುರಗಿಯ ಸ್ನೇಹಿತೆಯರು ಅಂದು ಶುಭಾಶಯ ಕೋರಲು ಬಂದಿದ್ದರು. ಅವರ ಜೊತೆಗೆ ಬಂದಿದ್ದ ಈತ ಯಾರೆನ್ನುವುದೇ ತಮಗೆ ಗೊತ್ತೇ ಇಲ್ಲ, ಈತನ ವಿರುದ್ಧ ಪ್ರಕರಣಗಳಿರುವುದೂ ತಮಗೆ ಗೊತ್ತಿಲ್ಲ, ಸಹಜವಾಗಿ ಎಲ್ಲರ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದೆ.

-ಜಿ. ಸಂಗೀತಾ, ಎಸ್ಪಿ, ಯಾದಗಿರಿ.