ಜಿಲ್ಲಾದ್ಯಂತ ಸಾವಿರಾರು ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸುವ ವಿಚಾರಣಾ ನೋಟಿಸ್: ರವೀಂದ್ರ ನಾಯ್ಕ
ಕನ್ನಡಪ್ರಭ ವಾರ್ತೆ ಶಿರಸಿಕರ್ನಾಟಕ ಅರಣ್ಯ ಕಾಯಿದೆ ಅಡಿಯಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವ ಸಂಬಂಧ ಜಿಲ್ಲಾದ್ಯಂತ ಸಾವಿರಾರು ಅರಣ್ಯವಾಸಿಗಳಿಗೆ ವಿಚಾರಣೆ ಹಾಜರಾಗಲು ನೋಟಿಸ್ ನೀಡಲಾಗುತ್ತಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಮಂಗಳವಾರ ಹೋರಾಟಗಾರರ ಕಾರ್ಯಾಲಯದಲ್ಲಿ ವಿಚಾರಣೆಗೆ ಹಾಜರಾಗಲು ಬಂದಿರುವಂತಹ ಅರಣ್ಯವಾಸಿಗಳೊಂದಿಗೆ ಸಮಾಲೋಚಿಸಿ ಮಾತನಾಡಿದರು.ಜಿಲ್ಲಾದ್ಯಂತ ಅಧೀಕೃತ ಅಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅವರಿಂದ ಅರಣ್ಯಕಾಯಿದೆ ಅಡಿಯಲ್ಲಿನ ಒಕ್ಕಲೆಬ್ಬಿಸುವ ನೋಟೀಸ್ ಜಾರಿಯಾಗುತ್ತಿದ್ದು, ವಿಚಾರಣೆಗೆ ಸಲ್ಲಿಸಿದ ನೋಟಿಸ್‌ನಲ್ಲಿ ದಾಖಲೆಗಳ ದೃಢೀಕೃತ ಪ್ರತಿಯನ್ನೂ ಹಾಗೂ ಅರಣ್ಯವಾಸಿಗಳ ಲಿಖಿತ ಹೇಳಿಕೆ ಸಲ್ಲಿಸಲು ಸೂಚಿಸಲಾಗಿದೆ. ಅಲ್ಲದೇ, ಅರಣ್ಯವಾಸಿಗಳ ವಿಚಾರಣೆಗೆ ಹಾಜರಾಗದೇ ಇದ್ದಲ್ಲಿ, ಅರಣ್ಯವಾಸಿಯ ಹೇಳಿಕೆ ಇಲ್ಲವೆಂದು ಪರಿಗಣಿಸಿ ಅರಣ್ಯವಾಸಿಯ ಅನುಪಸ್ಥಿಯಲ್ಲಿ ಒಕ್ಕಲ್ಲೆಬ್ಬಿಸುವ ಪ್ರಕರಣಕ್ಕೆ ಅಂತಿಮ ಆದೇಶ ಹೊರಡಿಸಲಾಗುವುದು ಎಂದು ನೋಟಿಸ್ನಲ್ಲಿ ಪ್ರಸ್ತಾಪಿಸಲಾಗಿದೆ.
ಸಂಚಾಲಕ ಗಣಪತಿ ನಾಯ್ಕ ಬಾಳೆಕೊಪ್ಪ, ಗಣಪ ಯಂಕ ಗೌಡ ಮುಳಗುಂದ, ಜಯಪ್ಪ ನಾಯ್ಕ ಬೆಕ್ಕೋಡ, ಗಿರಿಯ ನಾಯ್ಕ ಬಟಕ್ಕೋಡ, ಶಿವಾಜಿ ನಾಯ್ಕ ಬೆಡಸಗಾಂವ್, ನೆಹರು ನಾಯ್ಕ, ಗಣಪತಿ ಹೆಗಡೆ ಕೂರ್ಲಿ ಮತ್ತಿತರರು ಉಪಸ್ಥಿತರಿದ್ದರು.ದಾಖಲೆಗಳ ವಿವರ
ವಿಚಾರಣೆ ಸಂದರ್ಭದಲ್ಲಿ ಅರಣ್ಯವಾಸಿಗಳಿಗೆ ಹಾಜರಪಡಿಸಲು ನೋಟಿಸ್‌ನಲ್ಲಿ ಭೂ ಮಂಜೂರಾತಿ ಕೋರಿ ಸರ್ಕಾರಕ್ಕೆ ಸಲ್ಲಿಸಿದ ಅರ್ಜಿಯ ಸ್ವೀಕೃತಿ, ಮಂಜೂರಾದ ಬಗ್ಗೆ ಭೂ ಮಂಜೂರಿ ಆದೇಶ, ಭೂ ಮಂಜೂರಿ ಅಧಿಕಾರಿಯ ನಡಾವಳಿಗಳೂ, ಮಂಜೂರಿಗೆ ಸಂಬಂಧಿಸಿ ಸರ್ಕಾರಿ ದಾಖಲೆ ಅಥವಾ ಪುರಾವೆ ಮತ್ತು ಅರಣ್ಯವಾಸಿಯ ವೈವಾಟುಗಳ ಕ್ರಮ ಬದ್ಧತೆ ಕುರಿತು ದಾಖಲೆಗಳ ದೃಢೀಕೃತ ನಕಲು ವಿಚಾರಣೆಯ ಸಂದರ್ಭದಲ್ಲಿ ಹಾಜರುಪಡಿಸುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.