ನಾಡುಮಾಸ್ಕೇರಿ-ಕಾಯಂ ಪಿಡಿಒ ನೇಮಕಕ್ಕೆ ಆಗ್ರಹ

KannadaprabhaNewsNetwork |  
Published : Oct 22, 2025, 01:03 AM IST
ಗ್ರಾಮ ಪಂಚಾಯತ ಅಧಿಕಾರಿ ನೇಮಿಸುವ ಕುರಿತು ವಿಶೇಷ ಸಾಮಾನ್ಯ ಸಭೆ ನಡೆದಿರುವುದು  | Kannada Prabha

ಸಾರಾಂಶ

ನಾಡುಮಾಸ್ಕೇರಿ ಗ್ರಾಪಂಗೆ ಕಾಯಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಆ ಭಾಗದ ಸಾರ್ವಜನಿಕರು ಗ್ರಾಪಂಗೆ ಆಗ್ರಹಿಸಿದ ಘಟನೆ ಮಂಗಳವಾರ ನಡೆದಿದೆ.

ಸಾರ್ವಜನಿಕರಿಂದ ತೀವ್ರ ಆಕ್ಷೇಪ, ವಿಶೇಷ ಸಾಮಾನ್ಯ ನಡೆಸಿದ ಅಧ್ಯಕ್ಷ

ಕನ್ನಡಪ್ರಭ ವಾರ್ತೆ ಗೋಕರ್ಣ

ನಾಡುಮಾಸ್ಕೇರಿ ಗ್ರಾಪಂಗೆ ಕಾಯಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಆ ಭಾಗದ ಸಾರ್ವಜನಿಕರು ಗ್ರಾಪಂಗೆ ಆಗ್ರಹಿಸಿದ ಘಟನೆ ಮಂಗಳವಾರ ನಡೆದಿದೆ.

ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಬೇರೆಡೆಯ ಪಿಡಿಒ ಇಲ್ಲಿಗೆ ಕಳುಹಿಸಲಾಗುತ್ತಿದೆ. ನಮ್ಮ ಅಗತ್ಯ ಕೆಲಸಕ್ಕೆ ಬಂದಾಗ ಅಧಿಕಾರಿ ಬೇರೆ ಪಂಚಾಯಿತಿಯಲ್ಲಿ ಇರುತ್ತಾರೆ. ಇದರಿಂದ ಅಗತ್ಯ ಕಾರ್ಯಗಳಿಗೆ ತೊಡಕಾಗಿದೆ ಎಂದು ಜನಪ್ರತಿನಿಧಿಗಳ ಎದುರು ಅಳಲು ತೋಡಿಕೊಂಡರು.

ಜನಪ್ರತಿನಿಧಿಗಳ ಸಭೆ: ಸಾರ್ವಜನಿಕರ ಪಟ್ಟು ತೀವ್ರವಾಗುತ್ತಿದ್ದಂತೆ ನಾಡುಮಾಸ್ಕೇರಿ ಗ್ರಾಪಂ ಅಧ್ಯಕ್ಷ ಈಶ್ವರ ಗೌಡ ಎಲ್ಲ ಸದಸ್ಯರು ವಿಶೇಷ ಸಾಮಾನ್ಯ ಸಭೆ ನಡೆಸಿದರು. ಈ ಹಿಂದೆ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರನ್ನು ಭೇಟಿ ಮಾಡಿ ಅಧಿಕಾರಿಗಳ ಅಗತ್ಯತೆ ಬಗ್ಗೆ ಚರ್ಚಿಸಲಾಗಿತ್ತು. ಐದು ವರ್ಷಗಳಿಂದ ಇಲ್ಲಿನ ಗ್ರೇಡ್-೧ ಅಧಿಕಾರಿ ಭಾರತಿ ಕಾಂಬಳೆ ಕಾರವಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುರಿತು ತಿಳಿಸಲಾಗಿತ್ತು. ಎರಡು ದಿನದಲ್ಲಿ ಕಾಯಂ ಅಧಿಕಾರಿ ನೇಮಿಸುವುದು, ವಾರದಲ್ಲಿ ಮೂರು ದಿನ ಪಿಡಿಒ ಹಾಜರಿರುವಂತೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಆಗಿಲ್ಲ ಎಂದು ಸಭೆಯಲ್ಲಿ ಸದಸ್ಯರಿಂದ ಅಸಮಾಧಾನ ವ್ಯಕ್ತವಾಯಿತು.

ಒಂದು ವಾರದೊಳಗೆ ಅಧಿಕಾರಿ ನೇಮಿಸದಿದ್ದರೆ, ಜನರ ಜತೆ ಜನಪ್ರತಿನಿಧಿಗಳು ಒಂದಾಗಿ ಹೋರಾಟಕ್ಕೆ ನಿರ್ಧರಿಸಲಾಯಿತು. ಇಲ್ಲಿನ ಅಧಿಕಾರಿಗಳ ಅಗತ್ಯತೆ, ಸಮಸ್ಯೆ ಕುರಿತು ಸಭೆ ನಿರ್ಣಯ ಕೈಕೊಂಡು ನಡಾವಳಿಯನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗೆ ಕಳುಹಿಸಲಾಯಿತು.

ಏಕಾಏಕಿ ಪಂಚಾಯಿತಿಗೆ ಮುತ್ತಿಗೆ ಹಾಕಿದರೆ ಕೆಲಸವಾಗದು. ಈ ಹಿಂದೆ ತಾವು ಈ ಬಗ್ಗೆ ಮನವಿ ಮಾಡಿದ್ದನ್ನು ತಿಳಿಸಿ, ಒಂದು ವಾರದೊಳಗೆ ಅಧಿಕಾರಿಗಳ ನೇಮಕಕ್ಕೆ ಸಮಯ ನೀಡಿ, ಆದರೂ ಆಗದಿದ್ದರೆ ನಾವು ನಿಮ್ಮ ಜತೆ ಹೋರಾಟಕ್ಕೆ ಬರುತ್ತೇವೆ. ಈ ಬಗ್ಗೆ ಸಭೆಯಲ್ಲೂ ಒಕ್ಕೊರಲಿನ ನಿರ್ಣಯವಾಗಿದೆ ಎಂದು ಅಧ್ಯಕ್ಷ ಈಶ್ವರ ಗೌಡ ಜನರನ್ನು ಸಮಾಧಾನಡಿಸಿದರು. ಆ ಬಳಿಕ ವಾತಾವರಣ ತಿಳಿಯಾಯಿತು.

ಹೋರಾಟ ಮಾಡುತ್ತೇವೆ:

ಕಳೆದ ಐದು ವರ್ಷಗಳಿಂದ ಇಲ್ಲಿನ ಗ್ರೇಡ್ -೧ ಅಧಿಕಾರಿ ಕಾರವಾರದಲ್ಲಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಾರಿ ವರ್ಗಾವಣೆಯಲ್ಲಿ ಅವರ ಹೆಸರು ತೆಗೆದಿಲ್ಲ. ಹೊಸ ಅಧಿಕಾರಿಯನ್ನು ನೇಮಿಸಿಲ್ಲ. ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಯನ್ನು ಅ. ೬ರಂದು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಎರಡು ದಿನದಲ್ಲಿ ಬಗೆಹರಿಸುತ್ತೇವೆ ಎಂದಿದ್ದರು. ಇನ್ನೂವರೆಗೂ ಯಾವುದೇ ಕ್ರಮವಾಗಿಲ್ಲ. ಮೂರು ಅಧಿಕಾರಿಗಳು ಅಗತ್ಯವಿದ್ದು, ಒಬ್ಬರೂ ಕಾಯಂ ಅಧಿಕಾರಿ ಇಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಇನ್ನೂ ವಾರ ಕಾದು ನೋಡುತ್ತೇವೆ. ಇಲ್ಲವಾದರೆ ಮುಂದಿನ ವಾರ ಜನರೊಂದಿಗೆ ನಾವು ಸೇರಿ ಪ್ರತಿಭಟನೆ ಮಾಡುತ್ತೇವೆ ಎಂದು ಗ್ರಾಪಂ ಅಧ್ಯಕ್ಷ ಈಶ್ವರ ಗೌಡ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಕಳ್ಳತನಕ್ಕೆ ಕಳ್ಳರ ವಿಫಲಯತ್ನ
ಕೇಂದ್ರ ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭೇಟಿ