ಅರಸೀಕೆರೆ: ಜ್ಞಾನ, ವಿಜ್ಞಾನ ಕಲೆ, ಸಾಹಿತ್ಯದಂತೆ ಕ್ರೀಡಾ ಕ್ಷೇತ್ರದಲ್ಲೂ ಅಪ್ರತಿಮ ಸಾಧನೆಗೈಯುವ ಮೂಲಕ ತಮ್ಮ ಬದುಕು ರೂಪಿಸಿಕೊಳ್ಳುವ ಜತೆಗೆ ಕೋಟ್ಯಂತರ ಯುವ ಕ್ರೀಡಾಪಟುಗಳಿಗೆ ಆದರ್ಶರಾಗುವ ಅವಕಾಶ ಕ್ರೀಡಾ ಕ್ಷೇತ್ರ ಕಲ್ಪಿಸಿಕೊಡುತ್ತದೆ. ಕ್ರೀಡಾಕೂಟಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಸಾಧಕರಾಗಿ ಎಂದು ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ ಸಲಹೆ ನೀಡಿದರು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಮುಂದೆ ಗುರಿ, ಹಿಂದೆ ಗುರುವಿನ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ ಎಂಬುದನ್ನು ಯುವ ಕ್ರೀಡಾಪಟುಗಳು ಅರ್ಥಮಾಡಿಕೊಳ್ಳಬೇಕು. ತಮ್ಮ ನೆಚ್ಚಿನ ಕ್ರೀಡೆಯಲ್ಲಿ ಸ್ಪಷ್ಟವಾದ ಗುರಿ ಹಾಗೂ ಒಬ್ಬ ಸಮರ್ಥ ಗುರುವಿನ ಮಾರ್ಗದರ್ಶನ ಪಡೆದು ಸಾಗುವ ಜತೆಗೆ ಶಾಲಾ ಕಾಲೇಜು ಮಟ್ಟದ ಕ್ರೀಡಾಕೂಟ ತಮಗೆ ಒಂದು ಉತ್ತಮ ವೇದಿಕೆಯಾಗಲಿದೆ. ಹಾಗಾಗಿ ಸ್ಥಳೀಯ ಮಟ್ಟದ ಕ್ರೀಡಾಕೂಟಗಳ ಬಗ್ಗೆ ತಾತ್ಸಾರ ಮನೋಭಾವ ತಾಳಬಾರದು ಎಂದು ಕಿವಿಮಾತು ಹೇಳಿದರು.
ನಗರಸಭೆ ಅಧ್ಯಕ್ಷ ಎಂ ಸಮಿವುಲ್ಲಾ ಮಾತನಾಡಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಬೇಕಾದರೆ ನಮ್ಮ ದಿನಚರಿಯ ಒಂದೆರಡು ಗಂಟೆಗಳನ್ನು ಆಟೋಟಗಳಲ್ಲಿ ಕಳೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಆರೋಗ್ಯ ನಮ್ಮದಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಆಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದಕ್ಕಿಂತ ಮೊಬೈಲ್ ಒಳಗೆ ಮುಳುಗಿ ಹೋಗುತ್ತಿರುವುದು ಕಳವಳದ ಸಂಗತಿ ಎಂದರು.ಡಿವೈಎಸ್‌ಪಿ ಲೋಕೇಶ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜತೆಗೆ ಶಾಲಾ ಕಾಲೇಜು ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಹವ್ಯಾಸ ಬೆಳೆಸಿಕೊಳ್ಳಬೇಕು. ತಾವು ಪಡೆಯುವ ಮಾಸ್ ಕಾರ್ಡ್ ಅಂಕಗಳ ಜತೆಗೆ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪಡೆಯುವ ಸರ್ಟಿಫಿಕೇಟ್‌ಗಳು ಸಹ ತಾವು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದಾಗ ಉಪಯುಕ್ತವಾಗುತ್ತವೆ ಎಂದರು.
ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ರಾಷ್ಟ್ರೀಯ ಕ್ರೀಡಾಪಟುಗಳಾದ ವಿ.ಕಾರ್ತಿಕ್, ಪೂಜಾ ನಾಗೇಂದ್ರ, ಹಿರಿಯ ಕ್ರೀಡಾಪಟು ಎಚ್.ಟಿ.ಮಾದೇವ್, ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ ಲಿಂಗರಾಜು, ದೈಹಿಕ ಶಿಕ್ಷಕರಾದ ನಾಗೇಶ್, ಗೀತಾ, ಸ್ವಾತಿ, ಜೀವನ್, ಸಂದೀಪ್, ಪ್ರದೀಪ್, ರವಿ ಮತ್ತಿತರು ಹಾಜರಿದ್ದರು.