ಜಿಲ್ಲೆಯ ಮೊದಲ ಆಯುಷ್ಮಾನ್ ಆರೋಗ್ಯ ಕೇಂದ್ರ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ
ಕನ್ನಡಪ್ರಭ ವಾರ್ತೆ ಕುಮಟಾಉತ್ತಮ ಆರೋಗ್ಯವಿಲ್ಲದೇ ಮಾನವನಿಂದ ಯಾವುದೇ ಸಾಧನೆ ಅಸಾಧ್ಯ. ಆದ್ದರಿಂದ ಆರೋಗ್ಯಕ್ಕೆ ವಿಶೇಷ ಗಮನ ನೀಡಲಾಗಿದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಆರೋಗ್ಯ ಇಲಾಖೆಯೊಟ್ಟಿಗೆ ಶಿಕ್ಷಣ ಇಲಾಖೆಯ ಪಾತ್ರವೂ ಮಹತ್ವದ್ದಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ತಾಲೂಕಿನ ಕಲಭಾಗ ಪಂಚಾಯಿತಿ ವ್ಯಾಪ್ತಿಯ ಅಳ್ವೆಕೋಡಿಯಲ್ಲಿ ಶುಕ್ರವಾರ ಜಿಲ್ಲೆಯ ಮೊದಲ ಆಯುಷ್ಮಾನ್ ಆರೋಗ್ಯ ಕೇಂದ್ರ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.ಮಕ್ಕಳಲ್ಲಿ ಶಿಕ್ಷಣದ ಜತೆಗೆ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯ ಜಾಗೃತಿ ಮೂಡಿಸುವ ಮೂಲಕ ಸಮರ್ಥ ಯುವ ಪೀಳಿಗೆಯನ್ನು ದೇಶಕ್ಕೆ ನೀಡಬೇಕಾಗುತ್ತದೆ. ಯೋಗ, ಕ್ರೀಡೆ ಮುಂತಾದವುಗಳ ಮೂಲಕ ಶಿಕ್ಷಣ ಇಲಾಖೆ ಸದೃಢತೆಯನ್ನು ಹೆಚ್ಚಿಸಬೇಕಿದೆ. ಆರೋಗ್ಯ ಇಲಾಖೆ ಗ್ರಾಮೀಣ ಭಾಗದಲ್ಲೂ ಉತ್ತಮ ಸೇವೆ ನೀಡುವ ಮೂಲಕ ಸಮಾಜದ ಆರೋಗ್ಯ ಸುಧಾರಿಸುತ್ತಿದೆ. ವೈದ್ಯರಂತೆಯೇ ಶುಶ್ರೂಷಕಿಯರಿಂದಲೂ ಕಾಳಜಿಯುಕ್ತ ಸೇವೆ ಅಪೇಕ್ಷಣಿಯ. ಆಯುಷ್ಮಾನ ಆರೋಗ್ಯ ಕೇಂದ್ರದ ಪ್ರಯೋಜನ ಸಾರ್ವಜನಿಕರು ಪಡೆದುಕೊಳ್ಳಿ ಎಂದರು. ಕುಮಟಾದಲ್ಲಿ ಟ್ರಾಮಾ ಸೆಂಟರ್ ನಿರ್ಮಾಣಗೊಂಡಿದ್ದು ಮಂತ್ರಿಗಳ ಉಪಸ್ಥಿತಿಯಲ್ಲಿ ಶೀಘ್ರ ಉದ್ಘಾಟನೆಯ ನಿರೀಕ್ಷೆ ಇದೆ ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ಪ್ರಾಸ್ತಾವಿಕ ಮಾತುಗಳನ್ನಾಡಿ, ಸುಮಾರು ₹೬೫ ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ಜಿಲ್ಲೆಯ ಮೊದಲ ಆಯುಷ್ಮಾನ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಮಸ್ಯೆಗಳ ಪ್ರಾಥಮಿಕ ಹಂತದ ಚಿಕಿತ್ಸೆ ಹಾಗೂ ತಪಾಸಣೆ ಇಲ್ಲಿ ನಡೆಯಲಿದ್ದು, ಸಾಂಕ್ರಾಮಿಕವಲ್ಲದ ರೋಗಗಳ ಚಿಕಿತ್ಸೆಯೂ ಇರಲಿದೆ. ಜನರಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ. ಸಮುದಾಯ ಆರೋಗ್ಯಾಧಿಕಾರಿ ಹಾಗೂ ಶುಶ್ರೂಷಕಿಯರ ಸೇವೆ ಲಭ್ಯವಿರಲಿದ್ದು ಸ್ಥಳೀಯವಾಗಿಯೇ ನಿಯೋಜಿಸಲಾದ ಜನಾರೋಗ್ಯ ಸಮಿತಿಯಡಿಯಲ್ಲಿ ಕೇಂದ್ರವನ್ನು ಜನರಿಗೆ ಸಮರ್ಪಿಸಲಾಗುತ್ತಿದೆ. ಕಟ್ಟಡದ ಪ್ರಸ್ತಾವನೆ ಹಾಗೂ ಮಂಜೂರಿಗೆ ಸಂಬಂಧಿಸಿ ಕಲಭಾಗ ಪಂಚಾಯಿತಿ ಹಾಗೂ ಶಾಸಕರ ಸಹಕಾರ ಸ್ಮರಣೀಯ ಎಂದರು.ಆರೋಗ್ಯ ಕೇಂದ್ರ ಸ್ಥಾಪನೆಗೆ ೫ ಗುಂಟೆ ಭೂಮಿ ದಾನ ಮಾಡಿದ್ದ ದಿ. ಗಣಪತಿ ನಾಯ್ಕ ಮಾಸೂರಮನೆ ಸ್ಮರಣೆಯಲ್ಲಿ ಅವರ ಪುತ್ರ ಲಕ್ಷ್ಮಣ ನಾಯ್ಕರನ್ನು ಸನ್ಮಾನಿಸಲಾಯಿತು.
ಕಲಭಾಗ ಪಂಚಾಯಿತಿ ಅಧ್ಯಕ್ಷ ಮಂಜುನಾಥ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕಮಲಾ ಡೊಂಗರ್ಸಿ ಗಾವಡಿ, ಸದಸ್ಯರಾದ ರಾಘವೇಂದ್ರ ನಾಯ್ಕ, ಮಹಾದೇವಿ ಮುಕ್ರಿ, ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ, ತಾಪಂ ಪ್ರಭಾರ ಇಒ ಆರ್.ಎಲ್. ಭಟ್, ವೈದ್ಯಾಧಿಕಾರಿ ಡಾ. ಅರ್ಚನಾ ನಾಯ್ಕ ವೇದಿಕೆಯಲ್ಲಿದ್ದರು.ಆಶಾ ಕಾರ್ಯಕರ್ತೆಯರಾದ ಸೀಮಾ ಸಂಗಡಿಗರಿಂದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕಾಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಶ್ವೇಶ ಎನ್.ಬಿ. ಸ್ವಾಗತಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಆರ್.ಜಿ. ನಾಯ್ಕ ನಿರ್ವಹಿಸಿದರು. ಊರನಾಗರಿಕರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಪವಿತ್ರಾ, ಪ್ರತಿಭಾ ಬಡ್ತಿ, ರಂಜನಾ ನಾಯ್ಕ, ರುಕ್ಮಾ, ತನುಜಾ, ಶಿಲ್ಪಾ ಇತರರಿದ್ದರು.